
ದೇವದುರ್ಗ,ಜು.೦೪-
ಪಟ್ಟಣ ಹೊರವಲಯದಲ್ಲಿ ಕೈಗಾರಿಕೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪಡಿಸಿಕೊಂಡ ೨೯.೩೧ಎಕರೆ ಜಮೀನಿನಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ದೇವದುರ್ಗ ಕೈಗಾರಿಕೆ ಅಭಿವೃದ್ಧಿ ಹೋರಾಟ ಸಮಿತಿ ಸೋಮವಾರ ಮನವಿ ಸಲ್ಲಿಸಿತು.
ಪಟ್ಟಣ ಸಮೀಪದ ಸರ್ವೇ ನಂಬರ್ ೧೬/೧/೧, ೧೭/೧, ೧೭/೨, ೧೭/೩, ೧೯೫/೧, ೧೯೫/೨ರಲ್ಲಿ ಒಟ್ಟು ೨೯.೩೧ಎಕರೆ ಜಮೀನು ೧೯೯೨ರಲ್ಲಿ ಕೈಗಾರಿಕೆ ಅಭಿವೃದ್ಧಿಗಾಗಿ ಕೆಐಎಡಿಬಿ ಇಲಾಖೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಜಮೀನು ವಶಕ್ಕೆ ಪಡೆದು ೩೦ವರ್ಷ ಕಳೆದರೂ ಇಲಾಖೆ ಅಭಿವೃದ್ಧಿ ಮಾಡದೆ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದ ಜಮೀನನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡು ವ್ಯವಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಜಮೀನು ಅನ್ಯರ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಕೆಐಎಡಿಬಿ ಇಲಾಖೆ ಸ್ವಾಧೀನಪಡಿಸಿಕೊಂಡು ಜಮೀನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಕೊಳ್ಳಬೇಕು. ಉದ್ದೇಶಿತ ಕೈಗಾರಿಕೆಗಳ ಸ್ಥಾಪನೆ ಮಾಡಿ ನಿರುದ್ಯೋಗಿಗಳಿಗೆ ಕೆಲಸ ನೀಡಬೇಕು. ಯೋಜನೆಯಲ್ಲಿರುವಂತೆ ಕೈಗಾರಿಕೆ ಬಡಾವಣೆ ನಿರ್ಮಿಸಬೇಕು. ಮುಳ್ಳಿನ ಜಾಲಿ ತೆರವು ಮಾಡಿ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಸಂಚಾಲಕ ಮಲ್ಲಯ್ಯ ಕಟ್ಟಿಮನಿ, ಸಹಸಂಚಾಲಕ ಕೆ.ಬಸವರಾಜ ನಾಯಕ, ಶಿವಪ್ಪ ಬಲ್ಲಿದ್, ಸಂಚಾಲಕರ ಸಮಿತಿ ಸದಸ್ಯರಾದ ರಮೇಶ ಕಾಪೇಂಟರ್, ಹನುಮಂತ್ರಾಯ, ಮಹಿಬೂಬ್‌ಸಾಬ್ ಇತರರಿದ್ದರು.