
ಅಥಣಿ :ಮಾ.9: ನಿರುದ್ಯೋಗಿ ಯುವಕರು ಆರ್ಥಿಕವಾಗಿ ಮುಂದೆ ಬರಲು ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ ಜನರಿಗೆ ಸುಲಭ ಸೇವೆಗಳನ್ನು ನೀಡುವಲ್ಲಿ ಸೌಹಾರ್ದ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಹೊಸ ಉದ್ಯೋಗವನ್ನು ನೀಡುವುದು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸಹಕಾರಿ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಮಂಗಳವಾರ ಅಥಣಿ ಪಟ್ಟಣದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯ ನೂತನವಾಗಿ ಪ್ರಾರಂಭಗೊಂಡ ಶ್ರೀ ಲಕ್ಷ್ಮಣ ಸವದಿ ಸೌಹಾರ್ದ ಸಹಕಾರಿ ಸಂಘವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ನನ್ನ ಸ್ನೇಹಿತ ವರ್ಗ ಮತ್ತು ಹಿತೈಷಿಗಳು ಅನೇಕ ದಿನಗಳಿಂದ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಿ ನಮ್ಮ ತಾಲೂಕಿನ ನಿರುದ್ಯೋಗಿ ಯುವಕರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಉದ್ಯಮಿಗಳ ಸಂಖ್ಯೆ ಹೆಚ್ಚಿಸೋಣ ಎಂದು ಒತ್ತಾಯಿಸುತ್ತಿದ್ದ ಪರಿಣಾಮ ಈ ಸಹಕಾರಿ ಸಂಘವನ್ನು ಪ್ರಾರಂಭಿಸಲಾಗಿದೆ. ಎಂದರು.
ವಿಜಯಪುರ, ಬಾಗಲಕೊಟ ಹಾಗೂ ಬೆಳಗಾವಿ ಈ ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಸೌಹಾರ್ದ ಸಹಕಾರಿ ಸಂಘದ ಶಾಖೆಗಳನ್ನು ಮುಂದಿನ 5 ವರ್ಷಗಳಲ್ಲಿ ರಾಜ್ಯದ 10 ಜಿಲ್ಲೆಗಳಿಗೆ ವಿಸ್ತರಿಸುವ ಹಾಗೂ 1 ಸಾವಿರ ಕೋಟಿಗೂ ಅಧಿಕ ವಹಿವಾಟು ಮಾಡುವ ಗುರಿ ತಮ್ಮದಾಗಿದೆ. ಸೌಹಾರ್ದ ಸಹಕಾರಿ ಸಂಘದಿಂದ ವಾಹನ, ಬಂಗಾರ, ನಗದು ಪತ್ತಿನ, ಗೃಹ, ಸಣ್ಣ ಮತ್ತು ದೊಡ್ಡ ಕೈಗಾರಿಕೆ, ಮಧ್ಯಮ ಹಾಗೂ ದೀರ್ಘಾವಧಿ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವುದು ಎಂದ ಅವರು ಸಹಕಾರ ಸಂಘದ ಶಾಖೆಗಳನ್ನು ಪ್ರಾರಂಭಿಸುವ ಮೂಲಕ ನೇರವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಸಹಕಾರ ಸಂಘದ ಮೂಲಕ ಸಾಲ ಕೊಡುವ ಮೂಲಕ ಹೊಸ ಹೊಸ ಉದ್ಯಮ, ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ತಮ್ಮದಾಗಿದೆ.ತಾಲೂಕಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ್ದ ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಸಹಕಾರ ಸಂಘದಲ್ಲಿ ಅಪಾರ ಅನುಭವ ಹೊಂದಿರುವ ಈ ಭಾಗದ ರಾಜಕೀಯ ಮುತ್ಸದ್ದಿ ಲಕ್ಷ್ಮಣ ಸವದಿ ಅವರ ಹೆಸರಿನಲ್ಲಿ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಸೌಹಾರ್ದ ಸಹಕಾರಿ ಸಂಘದ ಮೂಲಕ ತಾಲೂಕಿನಲ್ಲಿ ಜನರಿಗೆ ಉದ್ಯೋಗ, ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಈ ಸಹಕಾರಿ ಸಂಘವನ್ನು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಪಾರದರ್ಶಕವಾಗಿ ನಡೆಸಿಕೊಂಡು ಹೋಗಬೇಕು. ಇಂದು ಆರಂಭಗೊಂಡ ಈ ಸಹಕಾರಿ ಸಂಘ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ:-
ಸೌಹಾರ್ದ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಮಾಜಿ ಡಿಸಿಎo ಲಕ್ಷ್ಮಣ ಸವದಿ ಅಧ್ಯಕ್ಷರಾಗಿ ಹಾಗೂ ನಂದಗಾಂವ ಗ್ರಾಮದ ಪ್ರಗತಿ ಪರ ರೈತ ಮುತ್ತಣ್ಣಾ ಕಾತ್ರಾಳ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಸಹಕಾರ ಇಲಾಖೆ ಅಧಿಕಾರಿ ಆರ್.ಎನ್.ನೂಲಿ ಘೋಷಿಸಿದರು.
ಸಂಘದ ನಿರ್ದೇಶಕರಾಗಿ ಶಿವಕುಮಾರ ಸವದಿ, ಶಂಭುಲಿಂಗ ಮಮದಾಪುರ, ಸೈಬಣ್ಣಾ ಕಮತಗಿ, ಶಿವರುದ್ರ ನೇಮಗೌಡ, ಸಂತೋಷ ಗಾಣಿಗೇರ, ಶಂಕರ ನಂದೇಶ್ವರ, ಪ್ರಸನ್ನ ಸಗರಿ, ಮುರಿಗೆಪ್ಪ ಭಾವಿ, ಸಿದ್ಧಪ್ಪ ಲೋಕುರ, ಜಡೇಪ್ಪ ಕುಂಬಾರ, ರಮೇಶ ಪಟ್ಟಣ, ಕವಿತಾ ನಾಯಿಕ, ಪ್ರೀತಿ ವರಲ್ಯಾನಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಪರಪ್ಪಣ್ಣಾ ಸವದಿ, ಯುವ ನಾಯಕ ಚಿದಾನಂದ ಸವದಿ, ಮಲ್ಲೇಶ ಸವದಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ ಎಂ ಪಾಟೀಲ, ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ಕಲ್ಲೇಶ್ ಮಡ್ಡಿ, ಮಲ್ಲೇಶ್ ಹುದ್ದಾರ, ರಾಜು ಗುಡೋಡಗಿ, ಶಿವಾನಂದ ದಿವಾನಮಳ, ಶ್ರೀಶೃಲ ನಾಯಿಕ, ಮುರುಗೆಪ್ಪ ತೊದಲಬಾಗಿ, ಶಿವರುದ್ರ ಘೂಳಪ್ಪನವರ, ಶಂಕ್ರಯ್ಯಾ ಸಾಲಿಮಠ,
ಸೇರಿದಂತೆ ಹಲವು ಸಹಕಾರಿ ಧುರೀಣರು, ರಾಜಕೀಯ ಮುಖಂಡರು, ಉದ್ಯಮಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.