ಕೈಗಾರಿಕಾ ಆಕ್ಸಿಜನ್ ಸಿಲಿಂಡರ್ ಹಿಂತಿರುಗಿಸಲು ಡಿಸಿ ಸೂಚನೆ

ಉಡುಪಿ, ಮೇ ೫- ಮಾರಕವಾಗುತ್ತಿರುವ ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ತಡೆದು ಜನರ ಜೀವವನ್ನು ರಕ್ಷಿಸಲು ಈಗ ಅತ್ಯಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್‌ಗಾಗಿ ಕೈಗಾರಿಕಾ ಆಕ್ಸಿಜನ್ ಸಿಲಿಂಡರ್‌ಗಳನ್ನು ತಕ್ಷಣವೇ ಸರಬರಾಜುದಾರರಿಗೆ ಹಿಂದಿರುಗಿ ಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸಂಬಂಧಿತರಿಗೆ ಸೂಚನೆ ನೀಡಿದ್ದಾರೆ.
ಈಗ ಮಾನವ ಜೀವ ರಕ್ಷಣೆ ಪ್ರಥಮ ಆದ್ಯತೆಯಾಗಿದ್ದು, ಇದಕ್ಕೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಶ್ಯಕತೆ ತುಂಬಾ ಇರುತ್ತದೆ. ಪ್ರಸ್ತುತ ಮೆಡಿಕಲ್ ಉದ್ದೇಶಗಳಿಗಾಗಿ ಆಕ್ಸಿನೇಟಡ್ ಸಿಲಿಂಡರಗಳ ಕೊರತೆ ತುಂಬಾ ಇದ್ದು, ಇದಕ್ಕಾಗಿ ಕೈಗಾರಿಕಾ ಆಕ್ಸಿಜನ್ ಸಿಲಿಂಡರ್‌ಗಳನ್ನು ವೈದ್ಯಕೀಯ ಸಿಲಿಂಡರ್‌ಗಳಾಗಿ ಮಾರ್ಪಾಡು ಮಾಡಲು ಕೇಂದ್ರ ಸರಕಾ ಈಗಾಗಲೇ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೈಗಾರಿಕಾ ಸಿಲಿಂಡರ್‌ಗಳನ್ನು ಪಡೆದುಕೊಂಡು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಸಂಬಂಧಿಸಿದ ಎಲ್ಲಾ ಕಾರ್ಖಾನೆಗಳ ಮಾಲಕರು ಈ ಕೂಡಲೇ ತಮ್ಮ ಬಳಿ ಇಟ್ಟುಕೊಂಡಿರುವ ಕೈಗಾರಿಕಾ ಸಿಲಿಂಡರ್‌ಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಿ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ವ್ಯವಸ್ಥಿತ ಹಾಗೂ ಸುಗಮ ಪೂರೈಕೆಗೆ ಸಹಕಾರ ನೀಡಿ ಕೋವಿಡ್ ರೋಗಿಗಳ ಆರೈಕೆಗೆ ಸಹಾಯ ಹಸ್ತ ಚಾಚು ವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿ.ಜಗದೀಶ್ ಮನವಿ ಮಾಡಿದ್ದಾರೆ.