ಕೈಕೊಟ್ಟ ಮುಂಗಾರು, ರೈತ ಕಂಗಾಲು

ಬೆಂಗಳೂರು,ಜೂ.೧೯- ರಾಜ್ಯಕ್ಕೆ ಮುಂಗಾರು ಕಾಲಿಟ್ಟು ವಾರ ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಹಾಗಾಗಿ ಇಡೀ ರಾಜ್ಯವೇ ಮುಂಗಾರು ಮಳೆಯ ನಿರೀಕ್ಷೆ ಮಾಡುತ್ತಿದೆ.ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರವೇಶಿಸಬೇಕಿತ್ತು.
ಜೂನ್ ಮೊದಲ ಎರಡು ವಾರಗಳಲ್ಲಿ ಶೇ.೭೦ ಕ್ಕಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮುಂಗಾರು ಮಾರುತಗಳು ದುರ್ಬಲಗೊಂಡಿದ್ದರಿಂದ ಮಳೆಯ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮಳೆ ಸುರಿಯಬಹುದೆಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡಿ, ಕೃಷಿಗೆ ಸಂಬಂಧಿಸಿದ ಪರಿಕರಗಳೊಂದಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಹಲವು ದಿನಗಳಿಂದ ಮಳೆ ಬಾರದೆ ಕೊಪ್ಪಳದ ರೈತರು ಕಂಗಾಲಾಗಿದ್ದರು. ಆದರೆ ಭಾನುವಾರ ಸುರಿದ ಮಳೆಯಿಂದಾಗಿ ಕಂಗೆಟ್ಟ ರೈತರ ಮುಖದಲ್ಲಿ ಸಂತಸ ಮೂಡಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ಉತ್ತಮ ಮಳೆಯಾಗಲಿ ಎಂದು ಗ್ರಾಮಸ್ಥರು ದೇವರ ಮೊರೆ ಹೋಗಿದ್ದರು. ಧಾರಾಕಾರ ಮಳೆಯಾಗುತ್ತಿದ್ದು, ಕೊಪ್ಪಳ ತಾಲೂಕಿನ ಮೈನಳ್ಳಿಯಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ತಗುಲಿದ ವರದಿಯಾಗಿದೆ.
ಇಂದಿನಿಂದ ಮೂರು ದಿನಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಯೊಂದಿಗೆ ತಣ್ಣನೆಯ ಗಾಳಿ ಬೀಸಲಿದೆ. ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಲಘು ಮಳೆಯಾಗಲಿದೆ. ಬಿಪರ್ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗಿದೆ. ಕಡಲತೀರದಲ್ಲಿ ದೊಡ್ಡ ಅಲೆಗಳು ಅಪ್ಪಳಿಸುತ್ತಿವೆ. ಉತ್ತರ ಕರ್ನಾಟಕದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿರುವ ವರದಿಯಾಗಿದೆ.
ರಾಜ್ಯದಲ್ಲಿ ಇದುವರೆಗೂ ಸುರಿದ ಮಳೆಯ ವಿವರ ಹೀಗಿದೆ.
ಬೆಂಗಳೂರು: ೨೯-೨೧, ಬೆಂಗಳೂರು ಗ್ರಾಮಾಂತರ: ೨೯-೨೧, ಚಿಕ್ಕಬಳ್ಳಾಪುರ: ೩೦-೨೧, ಕೋಲಾರ: ೩೧-೨೨, ರಾಮನಗರ: ೩೨-೨೨, ಮಂಡ್ಯ: ೩೨-೨೨, ಮೈಸೂರು: ೩೨-೨೨, ಚಾಮರಾಜನಗರ: ೩೨-೨೨, ಹಾಸನ: ೨೯-೨೧, ದಕ್ಷಿಣ ಕನ್ನಡ: ೩೧-೨೧, ಉಡುಪಿ: ೩೧-೨೬, ಉತ್ತರ ಕನ್ನಡ: ೩೧-೨೭, ಶಿವಮೊಗ್ಗ: ೩೨-೨೩, ಮಡಿಕೇರಿ: ೨೪-೧೮, ಚಿಕ್ಕಮಗಳೂರು: ೨೮-೨೦, ತುಮಕೂರು: ೩೨-೨೨ ಚಿತ್ರದುರ್ಗ: ೩೪-೨೩, ದಾವಣಗೆರೆ: ೩೪-೨೩, ಹಾವೇರಿ: ೩೪-೨೪, ಹುಬ್ಬಳ್ಳಿ: ೩೪-೨೩, ಧಾರವಾಡ: ೩೩-೨೨, ಬೆಳಗಾವಿ: ೩೨-೨೨, ಬೀದರ್: ೩೮-೨೬, ಕಲಬುರಗಿ: ೩೯-೨೭, ಯಾದಗಿರಿ: ೩೯-೨೮, ರಾಯಚೂರು: ೩೮-೨೭, ಬಳ್ಳಾರಿ: ೩೭-೨೫, ಗದಗ: ೩೬-೨೩, ಕೊಪ್ಪಳ: ೩೭-೨೪, ವಿಜಯಪುರ: ೩೮-೨೪ ಮತ್ತು ಬಾಗಲಕೋಟೆ: ೩೮-೨೪.