ಕೈಕೊಟ್ಟ ಮುಂಗಾರು: ರೈತ ಕಂಗಾಲು

ನಾಗರಾಜ ಹೂವಿನಹಳ್ಳಿ
ಕಲಬುರಗಿ,ಜೂ.22-ಈ ಬಾರಿ ಮುಂಗಾರು ಕೈಕೊಟ್ಟಿದೆ. ಇದರಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ.
ಮುಂಗಾರು ಮಳೆಯಾಗಿದ್ದರೆ ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಉದ್ದು, ಹೆಸರು, ಎಳ್ಳು, ಸೋಯಾ ಬಿತ್ತನೆಯಾಗಿ ಬೆಳೆಯಿಂದ ಭೂಮಿ ನಳನಳಿಸುತ್ತಿತ್ತು. ಭೂಮಿ ಹಸಿರಾಗಿ ರೈತರ ಮೊಗದಲ್ಲಿ ಸಂತಸ ಮನೆ ಮಾಡುತ್ತಿತ್ತು. ಆದರೆ, ಜೂನ್ ಮುಗಿಯುತ್ತ ಬಂದರೂ ಜಿಲ್ಲೆಯಲ್ಲಿ ಮಳೆಯಾಗದೇ ಇರುವುದರಿಂದ ಬಿತ್ತನೆಯಾಗಿಲ್ಲ. ಮುಂಗಾರು ಬೆಳೆ ಬಿತ್ತನೆಗಾಗಿ ರೈತರು ಸಾಲ-ಸೋಲ ಮಾಡಿ ತಂದ ಬಿತ್ತನೆ, ಬೀಜ ಗೊಬ್ಬರ ಮನೆಯಲ್ಲಿಟ್ಟುಕೊಂಡು ಮುಗಿಲಿನತ್ತ ಮುಖಮಾಡಿ ಕುಳಿಕೊಂಡಿದ್ದಾರೆ. ಇಂದು ಮಳೆಯಾದೀತು, ನಾಳೆ ಮಳೆಯಾದೀತು ಎಂದು ರೈತರು ಕಾಯುವುದೇ ಆಯಿತು. ಆದರೆ ಮಣ್ಣೆತ್ತಿನ ಅಮಾವಾಸ್ಯೆಯೂ ಮುಗಿದು ವಾರವಾಗುತ್ತ ಬಂದರೂ ಮಳೆ ಸುರಿಯದೇ ಇರುವುದು ರೈತರನ್ನು ತೀವ್ರ ಚಿಂತಿಗೀಡು ಮಾಡಿದೆ. ಮಳೆ ಇನ್ನೂ ಒಂದುವಾರ ಮುಂದೆ ಹೋದರೆ ಮುಂಗಾರು ಬೆಳೆಗಳನ್ನು ಬಿತ್ತಿಯೂ ಉಪಯೋಗವಾಗುವುದಿಲ್ಲ. ಬಿತ್ತನೆ ಮಾಡಿದರೂ ಬೆಳೆಗಳು ಸರಿಯಾಗಿ ಬರುವುದಿಲ್ಲ. ಮುಂಗಾರು ಬೆಳೆಗಳ ಅವಧಿ ಮುಗಿದೇ ಹೋಗುತ್ತದೆ ಇನ್ನೇನಿದ್ದರೂ ತೊಗರಿ ಬೆಳೆ ಮಾತ್ರ ಬೆಳೆಯಬಹುದು. ಮುಂಗಾರು ಮಳೆಯಾಗಿದ್ದರೆ ಹೆಸರು, ಉದ್ದು, ಎಳ್ಳು, ಸೋಯಾ ಬೆಳೆಗಳು ಕೈಗೆ ಬಂದು ರೈತರಿಗೆ ಒಂದಿಷ್ಟು ಆದಾಯ ದೊರೆಯುತ್ತಿತ್ತು. ಹಿಂಗಾರು ಬೆಳೆಗಳ ಬಿತ್ತನೆಗಾಗಿ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗುತ್ತಿತ್ತು. ಆದರೆ ಮಳೆ ಕೈಗೊಟ್ಟಿರುವುದರಿಂದ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕೃಷಿ ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲದೆ ಕಂಗೆಡುವಂತಾಗಿದೆ.
ಮೇವು-ನೀರಿನ ಸಮಸ್ಯೆ
ಮುಂಗಾರು ಮಳೆಯಾಗಿದ್ದರೆ ಇಷ್ಟೊತ್ತಿಗೆ ಭೂಮಿ ಹಸಿರಾಗಿ ಹುಲ್ಲು ಬೆಳೆಯುತ್ತಿತ್ತು. ಜಾನುವಾರುಗಳು ಹಸಿ ಹುಲ್ಲು ಮೇಯಲು ಅನುಕೂಲವಾಗುತ್ತಿತ್ತು. ಆದರೆ ಮಳೆಯಾಗದೆ ಇರುವುದರಿಂದ ಜಾನುವಾರುಗಳಿಗೆ ಹಸಿ ಮೇವು ದೊರೆಯದಂತಾಗಿದೆ. ನೀರಿನ ಸಮಸ್ಯೆಯೂ ತಲೆದೋರಿದೆ. ಮಳೆ ಕೈಕೊಟ್ಟಿದ್ದರಿಂದ ಜನ ಮಾತ್ರವಲ್ಲ ಜಾನುವಾರುಗಳಿಗೂ ಸಂಕಷ್ಟ ಎದುರಾದಂತಾಗಿದೆ.
ಮೋಡ ಬಿತ್ತನೆ ?
ಮಳೆ ಕೈಕೊಟ್ಟಿರುವುದರಿಂದ ಮೋಡ ಬಿತ್ತನೆ ಮಾಡಬೇಕು, ಸಂಕಷ್ಟದಲ್ಲಿರುವ ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂಬುವುದು ಜಿಲ್ಲೆಯ ರೈತರ ಒತ್ತಾಯವಾಗಿದೆ.

ಮೋಡ ಬಿತ್ತನೆ ಮಾಡಿ
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಸರು, ಉದ್ದು, ಎಳ್ಳು, ಸೋಯಾ ಬಿತ್ತನೆಗಾಗಿ ಸಾಲ ಮಾಡಿ ತಂದ ಬೀಜ, ಗೊಬ್ಬರ ಹಾಗೇ ಉಳಿದಿದೆ. ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆಲವೆಡೆ ಮಳೆಯಾದದ್ದು ಹೊರತುಪಡಿಸಿದರೆ ಮತ್ತೆಲ್ಲಿಯೂ ಮಳೆಯಾಗಿಲ್ಲ. ಹೀಗಾಗಿ ಸರ್ಕಾರ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಬೇಕು, ಇನ್ನೂ ಒಂದುವಾರ ಮಳೆಯಾಗದಿದ್ದರೆ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು.
ಕಳೆದ ವರ್ಷ ನೆಟೆರೋಗದಿಂದ ತೊಗರಿ ಬೆಳೆ ಹಾನಿಯಾದ ರೈತರಿಗೆ ಹಿಂದಿನ ಸರ್ಕಾರ ಪರಿಹಾರ ನೀಡುವುದಾಗಿ ಹೇಳಿ ನಯಾ ಪೈಸೆ ಪರಿಹಾರ ನೀಡಿಲ್ಲ. ಈಗಿನ ಸರ್ಕಾರ ಸಹ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ ಆದರೂ ಇಲ್ಲಿಯವರೆಗೆ ರೈತರಿಗೆ ಪರಿಹಾರ ದೊರೆತಿಲ್ಲ. ಸರ್ಕಾರ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಬೇಕು.
-ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷರು ಕರ್ನಾಟಕ ಪ್ರಾಂತ ರೈತ ಸಂಘ