ಕೈಕೊಟ್ಟ ಮಳೆ ಒಣಗಿದ ಮೆಕ್ಕೆ ಜೋಳ

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಆ. ೧೩: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟ ಮುಂದುವರಿದಿದೆ. ಜೂನ್ ತಿಂಗಳಲ್ಲಿ ಕೈಕೊಟ್ಟು, ಜುಲೈ ತಿಂಗಳಲ್ಲಿ ಚುರುಕುಗೊಂಡಿದ್ದ ಮುಂಗಾರು ಮಳೆ ಆಗಸ್ಟ್ ಮಾಹೆಯಲ್ಲಿ ಮತ್ತೆ ಸಂಪೂರ್ಣ ಕಣ್ಮರೆಯಾಗಿದೆ. ಹಲವೆಡೆ ಬೇಸಿಗೆಯ ಬಿಸಿಲು ಬೀಳಲಾರಂಭಿಸಿದೆ!
ಮಳೆ ಇಳಿಕೆಯಾಗಿ, ತಾಪಮಾನ ಏರಿಕೆಯಾಗಿರುವುದರ ನೇರ ಪರಿಣಾಮ ಕೃಷಿ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವಂತಾಗಿದೆ. ಹಲವೆಡೆ ಮೆಕ್ಕೆಜೋಳ ಬೆಳೆ ಒಣಗಲಾರಂಭಿಸಿದೆ. ಕೆಲ ಗ್ರಾಮಗಳಲ್ಲಿ ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದಿರುವುದರಿಂದ, ವರ್ಷಧಾರೆಗಾಗಿ ರೈತರು ಪ್ರಾರ್ಥಿಸುವಂತಾಗಿದೆ.
ಮತ್ತೊಂದೆಡೆ, ವಿದ್ಯುತ್ ಪೂರೈಕೆಯ ಮೇಲೂ ಪರಿಣಾಮ ಬೀರಲಾರಂಭಿಸಿದೆ. ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಳೆಗಾಲದ ವೇಳೆಯೇ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಾರಂಭಿಸಿದೆ.
ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.
ಕಳೆದ ಕೆಲ ದಿನಗಳಿಂದ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯ ವೇಳೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಗರ-ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಭಾಗದಲ್ಲಿ ಪವರ್ ಕಟ್ ಸಮಸ್ಯೆ ತೀವ್ರವಾಗಿದೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಾರೆ.
ಬೆಳೆ ರಕ್ಷಣೆಗೆ ಹರಸಾಹಸ: ಜುಲೈ ತಿಂಗಳಲ್ಲಿ ಬಿದ್ದ ವರ್ಷಧಾರೆಯಿಂದ ಬಹುತೇಕ ಕಡೆ ಮೆಕ್ಕೆಜೋಳ ಬೆಳೆ ಹುಲುಸಾಗಿ ಬೆಳೆದಿದೆ. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೆಳೆ ಹಾನಿಯ ಆತಂಕ ರೈತರದ್ದಾಗಿದೆ. ಮಳೆಯಾದರೆ ಬೆಳೆ ಉಳಿಯುತ್ತದೆ. ಇಲ್ಲದಿದ್ದರೆ ಸಂಪೂರ್ಣ ಒಣಗುತ್ತದೆ ಎಂದು ಕೆಲ ಬೆಳೆಗಾರರು ಅಳಲು ತೋಡಿಕೊಳ್ಳುತ್ತಾರೆ.
ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಸಂಪೂರ್ಣ ಕಡಿಮೆಯಿದೆ. ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲಿದೆ. ಜೊತೆಗೆ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಎದುರಾಗಲಿದೆ ಎಂದು ಕೆಲ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.

ಲಿಂಗನಮಕ್ಕಿ, ಭದ್ರಾ ಡ್ಯಾಂ ಭರ್ತಿಯಾಗುವುದು ಅನುಮಾನ?
ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಹಾಗೂ ಮಧ್ಯ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾದ ಭದ್ರಾ, ಈ ಬಾರಿ ಗರಿಷ್ಠ ಮಟ್ಟ ತಲುಪುವುದು ಅನುಮಾನವಾಗಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಾಟದಿಂದ, ಪ್ರಸ್ತುತ ಈ ಎರಡು ಪ್ರಮುಖ ಡ್ಯಾಂಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಸಂಪೂರ್ಣ ಕಡಿಮೆಯಿದೆ. ಆ. ೧೨ ರ ಬೆಳಿಗ್ಗೆ ೮ ಗಂಟೆಯ ಮಾಹಿತಿ ಅನುಸಾರ, ಲಿಂಗನಮಕ್ಕಿ ಡ್ಯಾಂ ನೀರಿನ ಸಂಗ್ರಹದ ಪ್ರಮಾಣ ೧೭೯೦ (ಗರಿಷ್ಠ ಮಟ್ಟ : ೧೮೧೯) ಅಡಿಯಿದೆ. ಕಳೆದ ವರ್ಷ ಇದೇ ದಿನದಂದ ಡ್ಯಾಂ ನೀರಿನ ಪ್ರಮಾಣ ೧೮೧೦.೫೫ ಅಡಿಯಿತ್ತು. ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ೨೯ ಅಡಿ ನೀರು ಸಂಗ್ರಹವಾಗಬೇಕಾಗಿದೆ. ಸದ್ಯ ೫೬೮೯ ಕ್ಯೂಸೆಕ್ ಒಳಹರಿವಿದೆ. ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಭದ್ರಾ ಡ್ಯಾಂನ ನೀರಿನ ಸಂಗ್ರಹ ಪ್ರಮಾಣ ೧೬೭ (ಗರಿಷ್ಠ ಮಟ್ಟ : ೧೮೬) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ೧೮೪ ಅಡಿ ನೀರು ಸಂಗ್ರಹವಾಗಿತ್ತು, ಬಹುತೇಕ ಗರಿಷ್ಠ ಮಟ್ಟಕ್ಕೆ ಬಂದಿತ್ತು. ಪ್ರಸ್ತುತ ೨೭೦೨ ಕ್ಯೂಸೆಕ್ ಒಳಹರಿವಿದೆ. ೧೭೧೮ ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.