
ದಾವಣಗೆರೆ,ಮಾ.೨೪: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮಕ್ಕೆ ದಾವಣಗೆರೆಯ ಜಿಎಂಐಟಿಯ ೪೦೦ ಎಕರೆಯಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಮಾರ್ಚ್ ೨೫ರ ನಾಳೆ ಮಧ್ಯಾಹ್ನ ೩ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಗೆ ಆಗಮಿಸಲಿದ್ದು, ಬೆಣ್ಣೆನಗರಿಯ ಕೇಸರಿಮಯವಾಗಿದ್ದು, ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಅಖಾಡ ಸಜ್ಜಾಗಿದೆ.
ಮಹಾಸಂಗಮ ನಡೆಯುವ ವೇದಿಕೆಯ ಪೆಂಡಾಲ್ ನಲ್ಲಿ ತೆರೆದ ಜೀಪ್ ನಲ್ಲಿ ಮೋದಿ ಅವರು ಜನರ ಮಧ್ಯೆಯಿಂದಲೇ ವೇದಿಕೆಗೆ ಆಗಮಿಸುವ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು ಎನ್ ಎಸ್ ಜಿ ಒಪ್ಪಿಗೆಗೆ ಕಾಯಲಾಗುತ್ತಿದೆ. ಈ ಮಹಾಸಂಗಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಇಲ್ಲಿಂದಲೇ ವಿಜಯಯಾತ್ರೆಗೆ ಚಾಲನೆ ಸಿಗಲಿದೆ. ಈ ಕುರಿತು ಸಂಸದ ಜಿ. ಎಂ. ಸಿದ್ದೇಶ್ವರ ಮಾತನಾಡಿ
ನಾಲ್ಕು ಜಿಲ್ಲೆಗಳಲ್ಲಿ ಮಾ. ೧ ರಿಂದ ಬಿಜೆಪಿ ವಿಜಯ ಸಂಕಲ್ಪ ಆರಂಭಗೊಂಡಿದ್ದು, ದಾವಣಗೆರೆಯಲ್ಲಿ ಸಮಾಪ್ತಿಗೊಳ್ಳಲಿದೆ. ಈಗಾಗಲೇ ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿಮಯ ಮಾಡಿ ಮೋದಿ ಫ್ಲೆಕ್ಸ್, ಬ್ಯಾನರ್, ಬಿಜೆಪಿ ಬಾವುಟ, ಕೇಸರಿ ಧ್ವಜಗಳು ರಾರಾಜಿಸುವಂತೆ ಮಾಡಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ವಿಜೃಂಭಣೆಯಿಂದ ಎಂದೂ ಆಗಿರಲಿಲ್ಲ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಗದಗ ಸೇರಿದಂತೆ ಏಳು ಜಿಲ್ಲೆಗಳನ್ನ ಪ್ರಮುಖವಾಗಿ ಉದ್ದೇಶವಾಗಿಟ್ಟುಕೊಂಡು ಈ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯೊಂದರಿಂದಲೇ ೩ ಲಕ್ಷ ಜನ ಬರುತ್ತಾರೆ. ಎಲ್ಲಾ ಶಾಸಕರಿಗೂ ಈ ಜವಾಬ್ದಾರಿ ನೀಡಲಾಗಿದೆ. ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ಕೆಲ ಸಚಿವರು, ರಾಜ್ಯ ಸರ್ಕಾರದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಸಂಘಟನೆಯ ಮುಖಂಡರು, ಕೋರ್ ಕಮಿಟಿ ಸದಸ್ಯರು ಆಗಮಿಸಲಿದ್ದಾರೆ ಎಂದರು. ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಮಧ್ಯಾಹ್ನ ೧೨ರಿಂದ ೧೨.೩೦ರೊಳಗೆ ಕಾರ್ಯಕರ್ತರು ಖುರ್ಚಿಯಲ್ಲಿ ಆಸೀನರಾಗಬೇಕು. ನೂಕು ನುಗ್ಗಲು ಆಗದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಮೋದಿ ಅವರನ್ನು ಹತ್ತಿರದಿಂದ ನೋಡುವ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾಸಂಗಮದ ಮೂಲಕ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ಪಕ್ಷವು ಮಿಷನ್ ೧೫೦ ಹೊಂದಿದೆ. ನಾಲ್ಕು ಕಡೆಗಳಲ್ಲಿ ಚಾಲನೆಗೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ೫೬೦೦ ಕಿಲೋಮೀಟರ್ ಸಂಚರಿಸಿದೆ. ಅದ್ಭುತ ರೋಡ್ ಶೋಗಳು ನಡೆದಿವೆ. ಸಂಜೆ ನಡೆಯುತ್ತಿದ್ದ ಪ್ರತಿ ರ್ಯಾಲಿಗೂ ೨೫ ರಿಂದ ೩೦ ಸಾವಿರ ಜನರು ಸೇರುವ ಮೂಲಕ ಬಿಜೆಪಿ ಪರ ಅಲೆ ಇದೆ ಎಂಬುದು ಋಜುವಾತಾಗಿದೆ.೧೩೨ ಕಡೆಗಳಲ್ಲಿ ರೋಡ್ ಶೋ ನಡೆಸಲಾಗಿದೆ ಎಂದರು.
ಭರ್ಜರಿ ಭೋಜನಕ್ಕೆ ಸಿದ್ದತೆ
ಮಹಾಸಂಗಮಕ್ಕೆ ೨೨೪ ಕ್ಷೇತ್ರಗಳಿಂದಲೂ ಜನರು ಆಗಮಿಸುತ್ತಾರೆ. ೪೦೦ ಕೌಂಟರ್ ಗಳನ್ನು ತೆರೆಯಲಾಗುತ್ತದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಜನರಿಗೆ ಬೆಳಿಗ್ಗೆ ೯.೩೦ರವರೆಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರಿಗೆ ಉಪ್ಪಿಟ್ಟು, ಕೇಸರಿಬಾತು ಟಿಫನ್ ಇರಲಿದೆ. ಇನ್ನು ಕಾರ್ಯಕ್ರಮಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಇರುತ್ತದೆ. ಒಂದು ಸಾವಿರ ಬಾಣಸಿಗರು ಇದ್ದು, ಮೂರು ತಂಡಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಮಧ್ಯಾಹ್ನ ಗೋಧಿ ಪಾಯಸ, ಮೊಸರನ್ನ, ಪಲಾವ್ ನೀಡಲಾಗುತ್ತದೆ ಎಂದು ತಿಳಿಸಿದರು.
ಪಾರ್ಕಿಂಗ್ ವ್ಯವಸ್ಥೆ:
ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ೪೪ ಜಾಗಗಳನ್ನು ಗುರುತಿಸಲಾಗಿದ್ದು, ಮೂರು ಕಿಲೋಮೀಟರ್ ವರೆಗೆ ೫೦೦ ಎಕರೆ ಜಾಗದಲ್ಲಿ ಈ ವ್ಯವಸ್ಥೆ ಮಾಡಲಾಗುವುದು. ೪೫ ವಿಭಾಗಗಳನ್ನು ರಚಿಸಲಾಗಿದ್ದು, ರಕ್ಷಣೆ, ಸ್ವಚ್ಛತೆ, ಕುಡಿಯುವ ನೀರು, ಮಜ್ಜಿಗೆ ಸೇರಿದಂತೆ ಬೇರೆ ಬೇರೆ ಸಿದ್ಧತೆ ಕುರಿತಂತೆ ಕಾರ್ಯನಿರ್ವಹಿಸಲಿದೆ.ಮಹಾಸಂಗಮ ಮುಗಿದ ಮೇಲೆ ಸ್ವಚ್ಛತೆಯನ್ನೂ ಈ ತಂಡ ಮಾಡಲಿದೆ. ೫ ಸಾವಿರ ಪ್ರಬಂಧಕರಿದ್ದು, ಮೋದಿ ಅವರ ಸ್ವಾಗತ ತಂಡದಲ್ಲಿ ೧೦೦ ಪ್ರಮುಖರು ಇರಲಿದ್ದಾರೆ ಎಂದರು.
ಮೂರು ವೇದಿಕೆ ನಿರ್ಮಾಣ
ಒಟ್ಟು ಮೂರು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ ನೂರು ಮಂದಿ ಮಾತ್ರ ಉಪಸ್ಥಿತರಿರುವರು. ಕೆಳಗಡೆ ಎರಡು ವೇದಿಕೆಗಳು ಇರಲಿವೆ. ಅಕ್ಕಪಕ್ಕದಲ್ಲಿ ವೇದಿಕೆ ಇರಲಿದೆ. ಒಂದೆಡೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಎಡ ವೇದಿಕೆಯಲ್ಲಿ ೩೯ ಜಿಲ್ಲಾಧ್ಯಕ್ಷರು, ಮುಖಂಡರು, ಪ್ರಮುಖರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ೨ ಲಕ್ಷ ಖುರ್ಚಿಗಳನ್ನು ಹಾಕಲಾಗುವುದು. ವಿಶಾಲ ಜಾಗವಿರುವುದರಿಂದ ಹೆಚ್ಚಿನ ಜನರಿಗೆ ತೊಂದರೆ ಆಗದು. ಶಾಮಿಯಾನದೊಳಗೆ ಚಿಕ್ಕದೊಳಗೆ ರೋಡ್ ಶೋ ನಡೆಸಲು ಯೋಜಿಸಲಾಗಿದೆ.