
ಶಿವಮೊಗ್ಗ, ಮಾ.13: ಸರ್ಜಿ ಫೌಂಡೇಶನ್, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ ಶಿವಮೊಗ್ಗದ ಬಿದರೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಎದುರಿನ ಶ್ರೀ ಸಾಯಿಬಾಬಾ ಮಂದಿರ ಬಳಿ ನೂತನ ಕೆರೆಯನ್ನು ನಿರ್ಮಿಸಿ ಭಾನುವಾರ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಯಜ್ಞ ಯಾಗದಿಂದ ಮಳೆ ಬರುತ್ತದೆ ಎನ್ನುವುದು ಹಿಂದಿನ ಕಾಲದ ಮಾತು. ಅದೀಗ ಪರಿಸರಕ್ಕೆ ಹಾನಿಯೇ ಉಂಟು ಮಾಡುತ್ತದೆ ಎಂದು ಹೇಳಬಹುದು. ಮೊದಲೆಲ್ಲಾ ಕೃತಜ್ಞಾತಾ ಪೂರ್ವಕವಾಗಿ ಪಂಚಭೂತಗಳಿಗೆ ಯಾಗ ಯಜ್ಞ ಮಾಡುತ್ತಿದ್ದರು. ಈಗ ನಾವು ಕೆರೆ ಕಟ್ಟೆಗಳನ್ನು ಉಳಿಸುವುದೇ ದೊಡ್ಡ ಯಾಗ ಯಜ್ಞವಾಗಿದೆ. ಮೊದಲು ಪ್ರಜೆಗಳಿಗೆ, ಗುರುಗಳಿಗೆ, ತಂದೆ ತಾಯಿಗಳಿಗೆ ಕೃತಜ್ಞತೆಗಾಗಿ ಯಾಗವನ್ನುಮಾಡುವ ಪದ್ಧತಿ ಇತ್ತು. ಈಗ ಭೂತ ಯಜ್ಞದ ಅವಶ್ಯವಿದ್ದು, ಭೂಮಿ, ಗಾಳಿ, ನೀರು, ಬೆಂಕಿ, ಬಯಲನ್ನು ಹಾಳು ಮಾಡದೇ ಇರುವುದು ಭೂತ ಯಜ್ಞ. ಪಂಚಭೂತಗಳನ್ನು ಸುಸ್ಥಿರವಾಗಿಡುವುದೇ ನಾವು ಮಾಡುವ ಯಜ್ಞ. ಕೆರೆಗಳಿಗೆ ಮರುಜೀವ ಕೊಟ್ಟರೆ ಅಪರೂಪದ ಆಸ್ತಿಯಾಗುತ್ತದೆ, ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಶಿವಮೊಗ್ಗಕ್ಕೆ ಪರಿಸರ ಪ್ರೇಮಿಗಳ ಕೊಡುಗೆ ಬಹು ದೊಡ್ಡದಿದೆ. ಪರೋಪಕಾರಂ ಇರಬಹುದು, ಪರ್ಯಾವರಣ ಟ್ರಸ್ಟ್, ಪರೋಪಕಾರಣ ಇರಬಹುದು, ಎಲ್ಲರೂ ಸೇರಿಕೊಂಡು ತುಂಬಾ ಪರಿಸರ ಪೂರಕ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.