ಕೇಳುವ ಕೆಲಸ ಬಿಜೆಪಿಗೆಕೊಡುವ ಕೆಲಸ ಕಾಂಗ್ರೆಸ್ ನದು: ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.5: ಗ್ಯಾರೆಂಟಿ ಯೋಜನೆಗಳ ಜಾರಿ ಮೂಲಕ ಕೇಳುವಂತ ಕೆಲಸ ಬಿಜೆಪಿ ಮಾಡಿದೆ. ಕೊಡುವಂತ ಕೆಲಸ ಕಾಂಗ್ರೆಸ್ ಮಾಡಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ನಗರದ ವಾಲ್ಮೀಕಿ ಭವನದಲ್ಲಿ ಇಂದು ಗೃಹಜ್ಯೋತಿ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸಮಾರಂಭದಲ್ಲಿದ್ದ ಬಿಜೆಪಿಯ ಪಾಲಿಕೆ ಸದಸ್ಯರಿಗೆ ನೀವು ಕೇಳುತ್ತಿರಬೇಕು ಆಗ ನಾವು ಕ್ರಿಯಾಶೀಲರಾಗಿ ಕೆಲಸ ಮಾಡಲು ಸಹಕಾರಿಯಾಗುತ್ತೆ ಎಂದರು.
ದೇಶದಲ್ಲಿ ನಿತ್ಯದ ಬದುಕಿಗೆ ಅವಶ್ಯವಾದ ಗ್ಯಾಸ್, ಡೀಸೆಲ್ ಪೆಟ್ರೋಲ್ ಬೆಲೆ, ಅಹಾರ ದಾನ್ಯ ಬೆಲೆ ಹೆಚ್ಚಳವಾಗಿರುವುದರಿಂದ ಬಡ ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆ ಆಗಿದ್ದನ್ನು ಅರಿತು ಗೃಹ ಲಕ್ಷ್ಮಿ ಯೋಜನೆ ಮೂಲಕ ಕುಟುಂಬಕ್ಕೆ ಮಾಸಿಕ ಎರೆಡು ಸಾವಿರ ನೀಡುವ ನಿರ್ಧಾರ ಕಾಂಗ್ರೆಸ್ ಮಾಡಿ ಜನತೆ ಉತ್ತಮ ಬದುಕಿಗೆ ಸಹಕಾರಿಯಾಗಿದೆಂದರು.
ಭಿನ್ನಾಭಿಪ್ರಾಯ ಇಲ್ಲ:
ಜಿಲ್ಲೆಯ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲ ಒಂದಾಗಿ ಇದ್ದೇವೆ ಎಂದು ಮಾಧ್ಯಮಗಳಿಗೆ ಹೇಳಲು ಬಯಸುವೆ ಎಂದು ಸಚಿವರು ಹೇಳಿದರು.
ಶಾಸಕ ಭರತ್ ರೆಡ್ಡಿ ಮಾತನಾಡಿ, ನಾವು ಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ.  ಇದರಲ್ಲಿ ರಾಜಕೀಯ ಇಲ್ಲ ಎಲ್ಲರಿಗೂ ಇದರ ಲಾಭ ದೊರೆಯಲಿದೆ. ಬರುವ ಒಂದು ವರ್ಷದಲ್ಲಿ ಮುಂಡ್ರಿಗಿ ಲೆಔಟ್ ನಲ್ಲಿ ಐದು ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಲಿದೆ.
ನಗರದಲ್ಲಿನ ಒಳ ಚರಂಡಿ ವ್ಯವಸ್ಥೆ ಸುಧಾರಿಸಲು ಯೋಜನೆ ರೂಪಿಸಲಿದೆ ಜೊತೆಗೆ ಭ್ರಷ್ಟಾಚಾರ ಮುಕ್ತ ಬಳ್ಳಾರಿ ಮಾಡಲಿದೆಂದರು.
ಜೆಸ್ಕಾಂ ಅಧಿಕಾರಿ ಆನಂದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವರ್ಗ ಬೇಧವಿಲ್ಲದೆ ಯೋಜನೆಯ ಲಾಭ ಪಡೆಯಬಹುದು. ಇದರಡಿ  2.ಲಕ್ಷದ 12 ಸಾವಿರದ 432 ಜನ ಇದರ ಲಾಭ ಪಡೆಯಲು ನೊಂದಾಯಿಸಿಕೊಂಡಿದ್ದಾರೆ. ಇದರಿಂದ  16.4 ಕೋಟಿ ರೂ ಲಾಭ ಜಿಲ್ಲೆಯ ಗ್ರಾಹಕರಿಗೆ ಆಗಲಿದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ  ಶಾಸಕ  ಗಣೇಶ್, ಮೇಯರ್ ಡಿ.ತ್ರಿವೇಣಿ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರ, ಅಧಿಕಾರಿಗಳಾದ ಬಂಡಾರು, ರಾಹುಲ್ ಸಂಕನೂರು, ಹೇಂಮತ್ ಕುಮಾರ್, ಲಕ್ಷ್ಮಣ್ ಚವ್ಹಾಣ್, ವೆಂಕಟೇಶಲು  ಮೊದಲಾದವರು ಇದ್ದರು.
ಅಚ್ಚುಕಟ್ಟು:
ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಪ್ರೋಟೋಕಾಲ್ ಪಾಲಿಸದೇ ಇದ್ದ ಬಗ್ಗೆ ಸಂಜೆವಾಣಿ ಮಾಡಿದ ವರದಿಗೆ ಎಚ್ಚೆತ್ತು ಇಂದಿನ ಸಭೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಜೋರು‌ಮಾಡಲಿಲ್ಲ:
ಅಖಂಡ ಬಳ್ಳಾರಿ ಇರಬೇಕಿತ್ತು. ಈ ಬಗ್ಗೆ ನಾಗೇಂದ್ರ ಅವರು ಅಂದು ಜೋರು ಮಾಡಿ ವಿರೋಧಿಸಲಿಲ್ಲ. ಒಂದಾಗಿದ್ದರೆ ಬೇಸಿತ್ತು ಎಂದು ಸಮಾರಂಭದಲ್ಲಿದ್ದ ಸಂಡೂರು ಶಾಸಕ ತುಕರಾಂ ಹೇಳಿ ಜಿಲ್ಲೆ ವಿಭಜನೆಯಾದ ನೋವನ್ನು ವ್ಯಕ್ತಪಡಿಸಿದರು.
 406 ಶಿಕ್ಷಕರಿಲ್ಲ:
ನಮ್ಮ‌ಕ್ಷೇತ್ರದಲ್ಲಿ 406 ಖಾಯಂ ಶಿಕ್ಷಕರಿಲ್ಲ. ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಇಲ್ಲದಿದ್ದರೂ ಪರವಾಗಿಲ್ಲ. ಶಿಕ್ಷಕರನ್ನು ನೇಮಕ‌ ಮಾಡಿ ಎಂದು ಡಿಸಿಯವನ್ನು ಕೋರಿದರು.
ಕೇಂದ್ರದ ಬಿಜೆಪಿಯವರು ಎಸ್ಸಿ ಎಸ್ಟಿಗೆ ಅನ್ಯಾಯ ಮಾಡುತ್ತಿದ್ದಾರೆಂದು, ಕೈಗಾರಿಕೆಗಳ 14.5 ಲಕ್ಷ ಕೋಟಿ ಸಾಲ‌ಮನ್ನಾ ಮಾಡಿದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ ಯಾಕೆ. ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ದಿವಾಳಿಯಾಗಲಿದೆ ಎನ್ನುವ ಮೋದಿಯವರೇ, ಕೈಗಾರಿಕೆಗಳ ಸಾಲ ಮನ್ನಾದಿಂದ ದೇಶ ದಿವಾಳಿ ಆಗಲ್ಲವಾ  ಎಂದು ಕೇಳಿದರು.
  ಬಳ್ಳಾರಿ ಜಿಲ್ಲೆಯಲ್ಲಿ ಐವರು ಶಾಸಕರು ಕಾಂಗ್ರೆಸ್ ನವರು ಪಂಚ ಪಾಂಡವರು ಇದ್ದಂತೆ ಇದ್ದೇವೆ. ಎಲ್ಲರೂ ಜೊತೆಯಾಗಿ  ಕುಳಿತು ಡಿಎಂಎಫ್, ಕೆಎಂಆರ್ ಸಿ ಯೋಜನೆಯಡಿಯ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ದಿ ಯೋಜನೆ ರೂಪಿಸೋಣ ಎಂದು ಹೇಳಿದರು.
ಗಣೇಶ್ ಭೀಮ ಆಗಲಿ
ತುಕರಾಂ ಅವರು ನಾವು ಪಂಚ ಪಾಂಡವರು ಎಂಬ ಮಾತಿನ ವಿಶ್ಲೇಷಣೆಗೆ ಇಳಿದಾಗ. ತುಕರಾಂ ಅವರು ನಾನು ಹಿರಿಯನಾಗಿರುವುದರಿಂದ ಧರ್ಮರಾಯ ಆಗುತ್ತೇನೆ. ನಾಗೇಂದ್ರ ಭೀಮ, ಗಣೇಶ್ ಅರ್ಜುನ, ನಾಗರಾಜ ಮತ್ತು ಭರತ್ ಅವರು ನಕುಲ ಸಹದೇವರಾಗಲಿ ಎಂದಾಗ.
ಸಚಿವ ನಾಗೇಂದ್ರ ನನಗೆ ಭೀಮ‌ಬೇಡ, ಕುಸ್ತಿಪಟುವಾದ ಗಣೇಶ್ ಭೀಮ‌ ಆಗಲಿ. ಈ ವಿಷಯದಲ್ಲಿ ಈಗಾಗಲೇ ಪ್ರೂ ಮಾಡಿದ್ದಾರೆಂಬ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.