ಕೇರಳ ಸೋಂಕು ಕರ್ನಾಟಕಕ್ಕೆ ಕಂಟಕ

ಬೆಂಗಳೂರು, ಸೆ.೨- ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ರಾಜ್ಯಕ್ಕೆ ಬರುವ ಮಂದಿ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು ಎಂದು ರಾಜ್ಯ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಅದು ಪಾಲನೆಯಾಗುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುವ ಆತಂಕ ತಲೆದೋರಿದೆ.
ಕೇರಳದಿಂದ ಪ್ರತಿನಿತ್ಯ ಬೆಂಗಳೂರಿಗೆ ಸರಾಸರಿ ೧೦ ವಿಮಾನಗಳು ಮತ್ತು ಆರು ರೈಲುಗಳಲ್ಲಿ ಸಾವಿರಾರು ಆಗಮಿಸುತ್ತಿದ್ದಾರೆ. ಆದರೆ ಬಹುತೇಕ ಮಂದಿ ಕ್ವಾರಂಟೈನ್ ಗೆ ಒಳಗಾಗದಿರುವುದು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಮತ್ತಷ್ಟು ತಲೆಬಿಸಿ ಮಾಡಿದೆ.
ವಿಮಾನ ರೈಲು ಮತ್ತು ರಸ್ತೆ ಮೂಲಕ ರಾಜ್ಯಕ್ಕೆ ಆಗಮಿಸುವ ಕೇರಳದ ಯಾವುದೇ ಪ್ರಯಾಣಿಕರ ಸೋಂಕಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ
ಕೇರಳದಿಂದ ವಿಮಾನ ರೈಲು ವಾಹನಗಳ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಆಗಮಿಸುವ ಜನರಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲು ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರದಾಡುವ ಸ್ಥಿತಿ ಎದುರಾಗಿದೆ.
ಅದರಲ್ಲಿಯೂ ವಿಮಾನ ಮತ್ತು ರೈಲಿನಿಂದ ಕೇರಳದಿಂದ ಬರುವ ಜನರ ಪೈಕಿ ಬಹುತೇಕರು ಬೆಂಗಳೂರಿಗೆ ಬರುತ್ತಿದ್ದಾರೆ ಹೀಗಾಗಿ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುವ ಆತಂಕದಲ್ಲಿ ಬಿಬಿಎಂಪಿ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಕೇರಳದಿಂದ ಬರುವ ವಿದ್ಯಾರ್ಥಿಗಳು ಮತ್ತು ಜನರ ಮೇಲೆ ಹದ್ದಿನಕಣ್ಣು ಇಟ್ಟಿದ್ದಾರೆ
ಆದರೂ ಕೂಡ ಎಲ್ಲರಿಗೂ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಮತ್ತು ಕೇರಳದಿಂದ ಬಂದವರು ಕ್ವಾರಂಟೈನ್ ನಲ್ಲಿ ಇರದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.
ಕೇರಳದಲ್ಲಿ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ ೩೦ರಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಮಿತಿಯಲ್ಲಿ ಅಲ್ಲಿಂದ ಬರುವ ಮಂದಿ ಕಡ್ಡಾಯವಾಗಿ ಒಂದು ವಾರದಲ್ಲಿ ಇರಬೇಕು ಎನ್ನುವ ನಿಬಂಧನೆ ಹಾಕಿದೆ.
ದೇಶದಲ್ಲಿ ಪ್ರತಿನಿತ್ಯ ಪತ್ತೆಯಾಗುವ ೧೦ ಕೊರೋನಾ ಸೋಂಕು ೬ ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗು ತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಾಸಮಾಡುತ್ತಿರುವ ಕೇರಳ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಕೇರಳದಿಂದ ಕರ್ನಾಟಕಕ್ಕೆ ಬಂದರೆ ಕಡ್ಡಾಯವಾಗಿ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.
ಕೇರಳದಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬ ಜನರು ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಏಳು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು. ಆ ನಂತರ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸರಕಾರ ಆದೇಶ ಹೊರಡಿಸಿದೆ

ನಕಲಿ ಆರ್‌ಟಿಪಿಸಿಆರ್ ತಂದರೆ ಕ್ರಮ
ಕೇರಳದಿಂದ ರಾಜ್ಯಕ್ಕೆ ಬರುವವರು ನಕಲಿ ಆರ್‌ಟಿಪಿಸಿಆರ್ ವರದಿಗಳನ್ನು ತಂದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಿಂದ ರಾಜ್ಯಕ್ಕೆ ಬರುವವರು ಕೊರೊನಾ ಆರ್‌ಟಿಪಿಸಿಆರ್ ನೆಗೆಟೀವ್ ವರದಿ ಹೊಂದಿರಬೇಕು. ಒಂದು ವೇಳೆ ನಕಲಿ ವರದಿ ತಂದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೇರಳದಿಂದ ರಾಜ್ಯಕ್ಕೆ ಬರುವವರನ್ನು ತಪಾಸಣೆ ಮಾಡಿಸಿಯೇ ಒಳ ಬಿಡಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.

ನೆಗೆಟೀವ್ ವರದಿ ಕಡ್ಡಾ
ಕೇರಳದಿಂದ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಪ್ರವೇಶಿಸುವ ಮಂದಿ ೭೨ ಗಂಟೆಗಳ ಮುಂಚೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಂಡ ನೆಗೆಟಿವ್ ವರದಿ ತಮ್ಮ ಬಳಿ ತರುವುದು ಕಡ್ಡಾಯ ಮಾಡಲಾಗಿದೆ.
ಕೇರಳದಿಂದ ಬರುವ ವಿದ್ಯಾರ್ಥಿಗಳು ಮತ್ತು ನಿವಾಸಿಗಳು ಆರ್ ಟಿ ಪಿಸಿಆರ್ ವರದಿ ಜೊತೆಯಲ್ಲಿ ಇಟ್ಟುಕೊಂಡಿರಬೇಕು ಇಲ್ಲದಿದ್ದರೆ ಅಂಥವರನ್ನ ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಪ್ರವೇಶ ಮಾಡದಂತೆ ನೋಡಿಕೊಳ್ಳಲು ಅಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ.

ಗಡಿ ಭಾಗದಲ್ಲಿ ಕಟ್ಟೆಚ್ಚರ:
ಕೇರಳ ಗಡಿಗೆ ಹೊಂದಿಕೊಂಡಂತಿರುವ ಮಂಗಳೂರು ಮೈಸೂರು-ಕೊಡಗು ಭಾಗದಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬ ಜನರನ್ನು ಮತ್ತು ವಾಹನಗಳನ್ನು ತಪಾಸಣೆ ಮಾಡಿ ಹೊರಬಿಡಲಾಗುತ್ತಿದೆ ನೆಗೆಟಿವ್ ವರದಿ ಇದ್ದವರಿಗೆ ಅಷ್ಟೇ ರಾಜ್ಯ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದು ಇಲ್ಲದವರನ್ನು ವಾಪಸ್ ಕಳುಹಿಸುವ ಕೆಲಸ ಮಾಡಲಾಗುತ್ತಿದೆ.
ಮತ್ತೆ ಕೆಲವು ಮಂದಿ ೭ದಿನ ಕ್ವಾರಂಟೈನ್ ನಲ್ಲಿ ಇರಬೇಕು ಎನ್ನುವ ತಾವಾಗಿಯೇ ವಾಪಸಾಗುತ್ತಿರುವ ಪ್ರಕರಣಗಳು ಗಡಿ ಭಾಗದಲ್ಲಿ ಕಂಡುಬರುತ್ತಿದೆ.

ಕ್ವಾರಂಟೈನ್ ಬದಲಿಲ್ಲ
ಕೇರಳದಿಂದ ಬರುವವರಿಗೆ ಕ್ವಾರಂಟೈನ್ ಬೇಡ ಎಂದು ಕೇರಳ ಸರ್ಕಾರ ಒತ್ತಡ ಹೇರಿದೆ. ಏನೇ ಒತ್ತಡಗಳಿದ್ದರೂ ಕೇರಳದಿಂದ ಬರುವವರನ್ನು ಕ್ವಾರಂಟೈನ್ ಮಾಡುವ ತೀರ್ಮಾನ ಬದಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದು ರಾಜ್ಯಕ್ಕೆ ಆತಂಕ ವಿಚಾರ. ಕೇರಳದಿಂದ ಬರುವವರಿಗೆ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
ಕೇರಳ ಸರ್ಕಾರ ಮತ್ತು ಜನತೆ ನೀಟ್ ಪರೀಕ್ಷೆ ಇರುವುದರಿಂದ ಕ್ವಾರಂಟೈನ್‌ನ ಒಂದು ವಾರ ಮುಂದೂಡಿ ಎಂದಿದ್ದಾರೆ. ಹಾಗಾಗಿ, ಕೇರಳ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನನಿತ್ಯ ದಕ್ಷಿಣ ಕನ್ನಡ ಉಡುಪಿಗೆ ಕೇರಳದಿಂದ ಬಂದು ಹೋಗುತ್ತಾರೆ. ಇಂತಹವರಿಗೆ ಪ್ರತಿವಾರ ಕೂಡ ಆರ್‌ಟಿಪಿಸಿಆರ್ ವರದಿ ಇರುವುದನ್ನು ಕಡ್ಡಾಯ ಮಾಡಿದ್ದೇವೆ. ೨ ಡೋಸ್ ಲಸಿಕೆ ತೆಗೆದುಕೊಂಡಿದ್ದರೂ ಆರ್‌ಟಿಪಿಸಿಆರ್ ವರದಿ ಇರಲೇಬೇಕು ಎಂದರು.
ಕೇರಳದಿಂದ ವೈಯಕ್ತಿವಾಗಿ ರಾಜ್ಯಕ್ಕೆ ಬರುವವರು ಮನೆಯಲ್ಲಿ ಕ್ವಾರಂಟೈನ್ ಆಗಲು ಅವಕಾಶ ನೀಡಲಾಗಿದೆ. ಆದರೆ, ಉದ್ಯೋಗ ಮತ್ತಿತರ ಕಾರ್ಯಗಳಿಗೆ ಬರುವವರನ್ನು ಆಯಾ ಸಂಸ್ಥೆಗಳೇ ಕ್ವಾರಂಟೈನ್ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.