ಕೇರಳ ಸೇರಿ 3 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ

ನವದೆಹಲಿ, ಏ.೯- ಕೋವಿಡ್ ಸೋಂಕು ಉಲ್ಬಣ ಕಾರಣದಿಂದಾಗಿ ಮೂರು ರಾಜ್ಯಗಳಲ್ಲಿ ಪುನಃ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಕೇರಳ, ಹರಿಯಾಣ ಹಾಗೂ ಪುದುಚೇರಿ ಯಲ್ಲಿ ಕೋವಿಡ್ ನಿಯಮ ಜಾರಿಗೊಳಿಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ.
ಕೇರಳದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್ ಸೋಂಕು ತುಸು ಹೆಚ್ಚಾಗಿದೆ. ಕಳೆದ ೨೪ ಗಂಟೆಗಳಲ್ಲಿ ಈ ರಾಜ್ಯದಲ್ಲಿ ೧,೮೦೧ ಜನರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಮಾಸ್ಕ್ ಕಡ್ಡಾಯಯ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಗರ್ಭಿಣಿಯರು, ವೃದ್ಧರು ಮತ್ತು ವಯೋಸಹಜ ಕಾಯಿಲೆ ( ಜೀವನ ಶೈಲಿ ಕಾಯಿಲೆ) ಇರುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಲಾಗಿದೆ.
ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸಚಿವರು ಮಾತನಾಡಿ, ಕೋವಿಡ್ ಸಂಬಂಧಿತ ಸಾವುಗಳು ಹೆಚ್ಚಾಗಿ ೬೦ ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹದಂತಹ ಜೀವನಶೈಲಿ ಕಾಯಿಲೆ ಇರುವವರಲ್ಲಿ ವರದಿಯಾಗುತ್ತಿವೆ. ಹೀಗಾಗಿ ಗರ್ಭಿಣಿಯರು, ವೃದ್ಧರು ಮತ್ತು ವಯೋಸಹಜ ಕಾಯಿಲೆ ಇರುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ.
ಹಾಗೇ, ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪುದುಚೇರಿ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಾದ ಬೀಚ್ ರಸ್ತೆ, ಉದ್ಯಾನವನಗಳು ಮತ್ತು ಚಿತ್ರಮಂದಿರಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವೆಂದು ಆದೇಶ ಹೊರಡಿಸಿದೆ.
ಆಸ್ಪತ್ರೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು, ಮನರಂಜನಾ ಕ್ಷೇತ್ರಗಳು, ಸರ್ಕಾರಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಇನ್ನೂ, ಹರ್ಯಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಶುಕ್ರವಾರ ಹರ್ಯಾಣದಲ್ಲಿ ೪೦೭ ಮಂದಿಗೆ ಸೋಂಕು ತಗುಲಿದೆ.
ರಾಜ್ಯದ ಆರೋಗ್ಯ ಇಲಾಖೆಯು ಕೋವಿಡ್ ನಿಯಮಗಳನ್ನು ಸೂಕ್ತವಾಗಿ ಪಾಲಿಸಲು ಸಾರ್ವಜನಿಕರಿಗೆ ಹೇಳಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ನಿಯಮವನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತ ಮತ್ತು ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.
ಒಟ್ಟಾರೆ, ಕೋವಿಡ್ ಹೆಚ್ಚಾಗುತ್ತಿದ್ದಂತೆ ಒಂದೊಂದು ರಾಜ್ಯದಲ್ಲಿ ನಿಧಾನವಾಗಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ, ಕೋವಿಡ್ ಪರೀಕ್ಷೆ ಕಡ್ಡಾಯದಂಥ ನಿಯಮಗಳು ಬರುತ್ತಿದೆ.