ಕೇರಳ ಬಂದ್‌ಗೆ ಪಿಎಫ್‌ಐ ಕರೆ ಕಲ್ಲು ತೂರಾಟ ದಾಂಧಲೆ

ತಿರುವನಂತಪುರ, ಸೆ. ೨೩- ದೇಶದ ವಿವಿಧೆಡೆ ಪಿಎಫ್‌ಐ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿರುವುದನ್ನು ಖಂಡಿಸಿ ಪಿ.ಎಫ್.ಐ. ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.ಕೇರಳ ಬಂದ್‌ಗೆ ಕರೆನೀಡಿರುವ ಪಿಎಫ್‌ಐ ವಿವಿಧೆಡೆ ಪ್ರತಿಭಟನೆ ನಡೆಸಿ ಬಸ್ ಹಾಗೂ ಮತ್ತಿತರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಹಲವಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಕಣ್ಣೂರಿನ ನಾರಾಯಣಪುರ ಸಮೀಪ ದಿನಪತ್ರಿಕೆ ಸಾಗಿಸುತ್ತಿದ್ದ ವಾಹನಗಳ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಅಲಪುಳದಲ್ಲಿ ರಾಜ್ಯರಸ್ತೆ ಸಾರಿಗೆ ಬಸ್‌ಗಳು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಹಾಗೂ ೧೫ ವರ್ಷದ ಬಾಲಕ ಗಾಯಗೊಂಡಿದ್ದಾನೆ.

ಕಾನೂನು ಕೈಗೆತ್ತಿಕೊಂಡು ಹಿಂಸಾಚಾರದಲ್ಲಿ ಶಾಮೀಲಾದರೆ ಅಂತಹವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಪಿಎಫ್‌ಐ ಸಂಘಟನೆ ಬಂದ್‌ಗೆ ಕರೆ ನೀಡಿದ್ದರೂ, ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ, ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಅಲುವಾ ಪ್ರದೇಶದಲ್ಲಿ ರಸ್ತೆ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಬಸ್‌ನ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಕಂಬನಿಪಾಡಿ ಡಿಪೋದಲ್ಲಿ ಈ ಘಟನೆ ಸಂಭವಿಸಿದೆ.
ಮುನ್ನೆಚ್ಚೆರಿಕೆ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸರು ವ್ಯಾಪಕ ಭದ್ರತೆ ಕೈಗೊಂಡಿದ್ದಾರೆ.ನಿನ್ನೆಯಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ೧೫ ರಾಜ್ಯಗಳಲ್ಲಿ ಪಿಎಫ್‌ಐ ಮುಖಂಡರ ಕಚೇರಿ ಮತ್ತು ನಿವಾಸಗಳ ಮೇಲೆ ಎನ್‌ಐಎ ದಾಳಿ ಮಾಡಿ ೧೦೬ ಮಂದಿ ನಾಯಕರನ್ನು ಬಂಧಿಸಿತ್ತು.