ಕೇರಳದ ಪುಟ್ಟು ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು
ಅರ್ಧ ಕೆ.ಜಿ ಅಕ್ಕಿ
ಅರ್ಧ ತೆಂಗಿನ ಕಾಯಿ ( ತುರಿದ)
ರುಚಿಗೆ ತಕ್ಕ ಉಪ್ಪು
ನೀರು
ಸಕ್ಕರೆ
ತಯಾರಿಸುವ ವಿಧಾನ
ಅಕ್ಕಿಯನ್ನು 4 ಗಂಟೆ ನೀರಿನಲ್ಲಿ ನೆನೆ ಹಾಕಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು ನೀರನ್ನು ಚೆಲ್ಲಿ ಅಕ್ಕಿಯಲ್ಲಿರುವ ನೀರು ಸೋಸಿ ಹೋಗಲು ಇಡಬೇಕು. ನಂತರ ಅಕ್ಕಿಯನ್ನು ಪುಡಿ ಮಾಡಬೇಕು. ಹೀಗೆ ಪುಡಿ ಮಾಡುವಾಗ ತುಂಬಾ ನುಣ್ಣಗೆ ಮಾಡಬಾರದು. ಈಗ ಅಕ್ಕಿ ಹಿಟ್ಟನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡುವಾಗ ಅಕ್ಕಿ ಹಿಟ್ಟನ್ನು ಸೌಟ್ ನಿಂದ ಆಡಿಸುತ್ತಾ ಇರಬೇಕು. ನಂತರ ಅಕ್ಕಿ ಹಿಟ್ಟನ್ನು ಆರಲು ಬಿಡಬೇಕು.
ಉಪ್ಪನ್ನು ನೀರಿನೊಂದಿಗೆ ಮಿಶ್ರ ಮಾಡಿ ಆ ನೀರನ್ನು ಹಿಟ್ಟಿನ ಮೇಲೆ ಚಿಮುಕಿಸಬೇಕು. ನೀರನ್ನು ಆ ಹಿಟ್ಟಿನ ಮೇಲೆ ಸ್ವಲ್ಪ ಚಿಮುಕಿಸಿ ಅದನ್ನು ಕೈಯಿಂದ ಬೆರೆಸುತ್ತಾ ಇರಬೇಕು. ಹೀಗೆ ಹಿಟ್ಟು ಮಿಶ್ರ ಮಾಡುವಾಗ ಹಿಟ್ಟು ತುಂಬಾ ಮೆತ್ತಗೆ ಆಗಬಾರದು, ತುಂಬಾ ಹುಡಿಯಾಗಿಯೂ ಇರಬಾರದು, ಆ ರೀತಿ ನೀರು ಹಾಕಿ ಕಲಿಸಬೇಕು. ಹೀಗೆ ಹಿಟ್ಟು ಕಲಿಸುವಾಗ ಸ್ವಲ್ಪ ತುರಿದ ತೆಂಗಿನ ಕಾಯಿ ಹಾಕಿದರೆ ಪುಟ್ಟು ಮತ್ತಷ್ಟು ರುಚಿಯಾಗುತ್ತದೆ.
ಇದನ್ನು ಮಾಡಲು ಪುಟ್ಟುಕುತ್ತಿ ಅಂತ ಪ್ರತ್ಯೇಕ ಪಾತ್ರೆ ಬರುತ್ತದೆ. ಆ ಪಾತ್ರೆಯ ತಳದಲ್ಲಿ ನೀರು ಹಾಕಿ ಕುದಿಯಲು ಇಡಬೇಕು. ಆ ಪಾತ್ರೆಯ ಮೇಲ್ಭಾಗದಲ್ಲಿ ಉದ್ದಕ್ಕಿರುವ ಒಂದು ಕೊಳವೆ ಪ್ರತ್ಯಕವಾಗಿ ಇರುತ್ತದೆ. ಆ ಕೊಳವೆ ತಳದಲ್ಲಿ ತೂತ-ತೂತವಾಗಿರುವ ಪಾತ್ರೆ ಇರುತ್ತದೆ. ಅದನ್ನು ಕೊಳವೆ ತಳದಲ್ಲಿ ಹಾಕಬೇಕು.
ನಂತರ ಕಾಲು ಭಾಗ ಮಿಶ್ರ ಮಾಡಿದ ಅಕ್ಕಿ ಹಿಟ್ಟು ತುಂಬಬೇಕು, ನಂತರ ತುರಿದ ತೆಂಗಿನಕಾಯಿ ಹಾಕಬೇಕು, ಮತ್ತೆ ಕಾಲು ಭಾಗ ಅಕ್ಕಿ ಹಿಟ್ಟು ಸ್ವಲ್ಪ ತೆಂಗಿನ ತುರಿ ಹೀಗೆ ಹಾಕಿ ಆ ಕೊಳವೆ ಆಕಾರದ ಪಾತ್ರೆ ತುಂಬ ಬೇಕು. ಅದರ ಮೇಲ್ಭಾಗದಲ್ಲಿ ತುರಿದ ತೆಂಗಿನ ಕಾಯಿ ಮತ್ತು ಸಕ್ಕರೆ ಹಾಕಿ ಅದರ ಮುಚ್ಚಳ ಹಾಕಿ ಅದರ ತಳಭಾಗದ ಪಾತ್ರೆಗೆ ಜೋಡಿಸಬೇಕು. ಪುಟ್ಟು ಬೆಂದಾಗ ಅಂದರೆ 10 ನಿಮಿಷದಲ್ಲಿ ಆವಿ ಬರಲಾರಂಭಿಸುತ್ತದೆ. ನಂತರ ಆ ಕೊಳವೆ ಪಾತ್ರೆಯನ್ನು ತೆಗೆದರೆ ಅದರಲ್ಲಿ ಪುಟ್ಟು ರೆಡಿ.