
ಪುತ್ತೂರು, ಎ.೬- ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ರಕ್ತರಾಜಕಾರಣಕ್ಕೆ ಕೊನೆಯಾಗಲಿದೆ. ಭೃಷ್ಟಾಚಾರ ಮತ್ತು ಹಿಂಸಾಚಾರದ ಮೂಲಕ ಕೇರಳದಲ್ಲಿ ರಾಜಕೀಯ ಅರಾಜಕತೆಯನ್ನು ಸೃಷ್ಠಿಸಿರುವ ಎಡರಂಗ ಈ ಬಾರಿ ಅಧಿಕಾರದಿಂದ ಕೆಳಗಿಳಿಯಲಿದೆ. ಬದಲಾವಣೆಯ ವಾತಾವರಣವಿರುವ ಕೇರಳದಲ್ಲಿ ಎಡ ಮತ್ತು ಬಲರಂಗಗಳ ವಿರುದ್ಧ ಮತದಾರರು ಆಕ್ರೋಶಿತರಾಗಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ಕುಮಾರ್ ಕಟೀಲು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಬಿಜೆಪಿ ಕನಿಷ್ಟ ೧೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಖಚಿತ. ಪಿಣರಾಯಿ ಸರ್ಕಾರದ ಅರಾಜಕ ರಾಜಕಾರಣ ಮತ್ತು ಮುಸ್ಲಿಂ ಲೀಗ್ ನಿಯಂತ್ರಿತ ಕಾಂಗ್ರೆಸ್ನ ತುಷ್ಟೀಕರಣ ನೀತಿಯನ್ನು ಕೇರಳದ ಮತದಾರರು ತಿರಸ್ಕರಿಸಲಿದ್ದಾರೆ ಎಂದರು.
ನಕ್ಸಲರ ಅಟ್ಟಹಾಸವನ್ನು ಮಟ್ಟ ಹಾಕುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದ್ದು ಚತ್ತೀಸ್ಘಡದಂತಹ ಪ್ರದೇಶದಲ್ಲಿ ಮಾತ್ರ ಈಗ ನಕ್ಸಲ್ ಚಳುವಳಿಯ ಅಲ್ಪಸ್ವಲ್ಪ ಪ್ರಭಾವವಿದೆ. ಉಳಿದಂತೆ ದಕ್ಷಿಣ ಭಾರತದಲ್ಲಿ ನಕ್ಸಲರ ಯಾವುದೇ ಪ್ರಭಾವ ಇಲ್ಲ. ಕರ್ನಾಟಕ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.
ಜಿಲ್ಲಾ ಪಂಚಾಯತು ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ಬಿಜೆಪಿ ಸಿದ್ಧತೆ ನಡೆಸಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.