ಕೇರಳದಲ್ಲಿ ಹೊಸ ಜ್ವರ: ಗಡಿಭಾಗದಲ್ಲಿ ಕಟ್ಟೆಚ್ಚರ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.16:- ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ನಿಫಾ, ಕೋವಿಡ್, ಹಕ್ಕಿಜ್ವರ, ಹಂದಿಜ್ವರದ ಬಳಿಕ ಇದೀಗ ವೆಸ್ಟ್ ನೈಲ್ ಜ್ವರದ ಭೀತಿ ಎದುರಾಗಿದ್ದು, ಕೇರಳದಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಕೇರಳಕ್ಕೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಾವಲಿ ಚೆಕ್‍ಪೆÇೀಸ್ಟ್‍ನಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ.
ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ಕೇರಳದಲ್ಲಿ ಕಾಣಿಸಿಕೊಂಡು ರಾಜ್ಯಕ್ಕೆ ಹರಡಿದ್ದರಿಂದ ಹೆಚ್ಚು ನಿಗಾ ವಹಿಸಲಾಗಿದೆ. ಎಲ್ಲಾ ವೈರಸ್‍ಗಳು ಮೊದಲು ಕೇರಳದಲ್ಲಿ ಕಂಡು ಬಂದು ನಂತರ ಬೇರೆ ರಾಜ್ಯಗಳಿಗೆ ವ್ಯಾಪಿಸುತ್ತಿರುವುದರಿಂದ ಎಚ್ಚರಿಕೆ ವಹಿಸಲಾಗಿದೆ. ರೋಗಿಗಳು ಕೇರಳ ಗಡಿ ಮೂಲಕ ಮೈಸೂರಿಗೆ ಪ್ರವೇಶ ಪಡೆಯುವುದರಿಂದ ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೆÇೀಸ್ಟ್‍ಗಳಲ್ಲಿ ತೀವ್ರ ನಿಗಾವಹಿಸಲಾಗಿದ್ದು, ಗಡಿ ಭಾಗದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಜನಜಾಗೃತಿ ಮೂಡಿಸಲಾಗುತ್ತಿದೆ. ಕೇರಳದಿಂದ ರಾಜ್ಯಕ್ಕೆ ಬರುವವನ್ನು ತಪಾಸಣೆ ಮಾಡಲಾಗುತ್ತಿದೆ.
ಈ ನಡುವೆ ಗಡಿ ಭಾಗದ ಹಲವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜ್ವರ, ತಲೆನೋವು, ಶೀತ ಬಾಧೆಯಿಂದ ಬಳಲುತ್ತಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ರವಾನಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಜ್ವರ, ಮೈ ಕೈ ನೋವಿನ ಜತೆಗೆ ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು ವೆಸ್ಟ್ ನೈಲ್ ಜ್ವರದ ಲಕ್ಷಣಗಳು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ಸೇವೆ ಮೇಲ್ದರ್ಜೆಗೆ: ಆರೋಗ್ಯ ಸೇವೆಯನ್ನು ಉನ್ನತ ದರ್ಜೆಗೇರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲಾಡಳಿತದಿಂದ ಅರೋಗ್ಯ ಇಲಾಖೆಗೆ ಕಾರುಗಳನ್ನು ಹಸ್ತಾಂತರಿಸಲಾಗಿದೆ. ತಾಲೂಕು ಅರೋಗ್ಯಾಧಿಕಾರಿಗಳು ಈ ಕಾರುಗಳನ್ನು ಬಳಕೆ ಮಾಡಿಕೊಳ್ಳಲಿದ್ದಾರೆ. ಪ್ರತಿ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡುವ ಸಲುವಾಗಿ ಕಾರುಗಳನ್ನು ನೀಡಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಸ್ತಾಂತರಿಸಿದ್ದು, ನೂತನ ಕಾರುಗಳಿಗೆ ಹಸಿರು ನಿಶಾನೆ ತೋರಿ, ತಾಲೂಕು ಆರೋಗ್ಯಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಕೀ ನೀಡಿದರು.