ಕೇರಳದಲ್ಲಿ ಮಂಕಿಪಾಕ್ಸ್ ರಾಜ್ಯದಲ್ಲಿ ಅಲರ್ಟ್

ಗಡಿಯಲ್ಲಿ ತಪಾಸಣೆ

ಬೆಂಗಳೂರು,ಜು.೧೯- ದೇಶದಲ್ಲಿ ೨ನೇ ಮಂಕಿಪಾಕ್ಸ್ ರೋಗ ದೃಢಪಟ್ಟಿದ್ದು, ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಕಂಡು ಬಂದ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ರಾಜ್ಯ ಪ್ರವೇಶಿಸುವವರ ಮೇಲೆ ಕಣ್ಗಾವಲು ಇಡಲಾಗಿದ್ದು, ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ.
ಕಳೆದ ಜುಲೈ ೧೩ ರಂದು ದುಬೈನಿಂದ ಮಂಗಳೂರು ಮೂಲಕ ಕಣ್ಣೂರಿಗೆ ಆಗಮಿಸಿದ ೩೧ ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಖಚಿತ ಪಟ್ಟಿತ್ತು. ಈತ ಮಂಗಳೂರಿಗೆ ವಿಮಾನದಲ್ಲಿ ಬಂದು ನಂತರ ಕಣ್ಣೂರಿಗೆ ತೆರಳಿದ್ದು, ಈತನ ಜತೆ ಮಂಗಳೂರಿಗೆ ಆಗಮಿಸಿದ್ದ ವಿಮಾನದಲ್ಲಿದ್ದ ೩೦ ಸಹ ಪ್ರಯಾಣಿಕರನ್ನು ಹೋಂ ಐಸೋಲೇಷನ್‌ನಲ್ಲಿಡಲಾಗಿದೆ.ಈತನ ಜತೆ ವಿಮಾನದಲ್ಲಿ ಒಟ್ಟು ೧೯೧ ಪ್ರಯಾಣಿಕರಿದ್ದು, ಅವರಲ್ಲಿ ಶಿಷ್ಟಾಚಾರದ ಪ್ರಕಾರ ಮುಂದಿನ ಮೂರು ಸೀಟು ಮತ್ತು ಹಿಂದಿನ ಸೀಟುಗಳ ೩೪ ಪ್ರಯಾಣಿಕರನ್ನು ತಪಾಸಣೆ ಮಾಡಬೇಕಿದ್ದು, ಇವರಲ್ಲಿ ೧೦ ಮಂದಿ ಮಂಗಳೂರು, ೧೫ ಮಂದಿ ಕಣ್ಣೂರು ಮತ್ತು ೯ ಮಂದಿ ಉಡುಪಿಯವರಾಗಿದ್ದು, ಇವರಲ್ಲಿ ೩೦ ಮಂದಿಯನ್ನು ಪತ್ತೆಹಚ್ಚಿ, ೨೧ ದಿನಗಳವರೆಗೆ ಹೋಂಐಸೋಲೇಷನ್‌ನಲ್ಲಿಡಲಾಗಿದೆ. ಉಳಿದ ೪ ಮಂದಿಯ ಪತ್ತೆಕಾರ್ಯ ನಡೆದಿದೆ.
ಹೋಂಐಸೋಲೇಷನ್ ಆದವರ ಆರೋಗ್ಯವನ್ನು ಪ್ರತಿನಿತ್ಯ ಪರೀಕ್ಷಿಸಲಾಗುತ್ತಿದ್ದು, ಮಂಕಿಪಾಕ್ಸ್ ಲಕ್ಷಣಗಳೂ ಕಂಡು ಬಂದರೆ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರ ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ರಾಜೇಶ್ ತಿಳಿಸಿದರು.
ಮೈಸೂರು-ಮಂಗಳೂರು ಗಡಿಯಲ್ಲಿ ಕಟ್ಟೆಚ್ಚರ
ಕೇರಳದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕಂಡು ಬಂದ ಹಿನ್ನೆಲೆಯಲ್ಲಿ ಕೇರಳದಿಂದ ಮಂಗಳೂರು ಪ್ರವೇಶಿಸುವವರ ಮೇಲೆ ನಿಗಾ ವಹಿಸಲಾಗಿದೆ. ಹಾಗೆಯೇ ಕೇರಳ-ಮೈಸೂರು ಗಡಿಯಲ್ಲೂ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿದಿನ ಗಡಿ ಭಾಗದಿಂದ ಜಿಲ್ಲೆಗೆ ಪ್ರವೇಶಿಸುವ ೨೫೦ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆ ಮಾಡಲಾಗುತ್ತಿದೆ. ಮೈಸೂರಿನ ಹೆಚ್‌ಡಿ ಕೋಟೆ ತಾಲ್ಲೂಕು ಅಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಈ ತಪಾಸಣೆ ನಡೆದಿದೆ.
ಬಂದರು. ವಿಮಾನನಿಲ್ದಾಣದಲ್ಲಿ ತಪಾಸಣೆ ವಿದೇಶಗಳಿಂದ ಬರುವವರಿಂದ ಮಂಕಿಪಾಕ್ಸ್ ತಡೆಯಲು ಕೇಂದ್ರ ಸರ್ಕಾರ ವಿಮಾನನಿಲ್ದಾಣ ಮತ್ತು ಬಂದರುಗಳಲ್ಲೂ ನಿಗಾ ವಹಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತಿದೆ. ದೇಶದಲ್ಲಿ ಮಂಕಿಪಾಕ್ಸ್ ತಡೆಗಟ್ಟಲು ಕಟ್ಟೆಚ್ಚರ ವಹಿಸಲಾಗಿದೆ.
ಕರ್ನಾಟಕದಲ್ಲಿ ಇದುವರೆಗೂ ಮಂಕಿಪಾಕ್ಸ್‌ನ ಯಾವುದೇ ಪ್ರಕರಣ ವರದಿಯಾಗಿಲ್ಲ.

ಡಬ್ಲ್ಯುಎಚ್‌ಓ ಕಳವಳ
ಭಾರತದಲ್ಲೂ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಅಥವಾ ಮಂಗನ ಸಿಡುಬು ಖಾಯಿಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ, ಮಂಕಿಪಾಕ್ಸ್ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಹೇಳಿತ್ತು. ಆದರೆ, ಈಗ ಮಂಕಿಪಾಕ್ಸ್ ನಾನಾ ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವುದರಿಂದ ಆರೋಗ್ಯ ತುರ್ತುಸ್ಥಿತಿಯಲ್ಲ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಮಂಕಿಪಾಕ್ಸ್‌ಗೆ ತುತ್ತಾಗಿರುವವರು ಬಹುತೇಕ ಮಂದಿ ಮಧ್ಯವಯಸ್ಕರಾಗಿದ್ದಾರೆ. ಅಲ್ಲದೇ ಇವರಲ್ಲಿ ಬಹುತೇಕರು ಪುರುಷರೇ ಆಗಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಖಾಯಿಲೆ ಕಾಣಿಸಿಕೊಂಡ ಪ್ರತಿ ಐವರಲ್ಲಿ ಮೂವರು, ಪುರುಷ ಮತ್ತು ಪುರುಷ ಲೈಂಗಿಕ ಸಂಪರ್ಕ ಮಾಡಿರುವವರು ಎಂದು ಡಬ್ಲ್ಯುಎಚ್‌ಒ ವರದಿ ಮಾಡಿದೆ.
ಮಂಕಿಪಾಕ್ಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಗೆಬ್ರೇಯೇಸಸ್ ಕಳವಳ ವ್ಯಕ್ತಪಡಿಸಿದ್ದು, ಸದ್ಯ ಈ ಸೋಂಕು ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಹೇಳಿದ್ದರು.
ಪ್ರಮುಖವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ಪ್ರಕರಣಗಳು ಮೇ ತಿಂಗಳಿನಿಂದ ಈಚೆಗೆ ಇತರ ದೇಶಗಳಲ್ಲಿಯೂ ಉಲ್ಬಣಗೊಂಡಿವೆ. ಹೆಚ್ಚಾಗಿ ಪಶ್ಚಿಮ ಯುರೋಪ್‌ನಲ್ಲಿ ಪತ್ತೆಯಾಗುತ್ತಿವೆ.
ಅದೇ ರೀತಿ, ಸುಮಾರು ೫೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ವರ್ಷ ೩,೨೦೦ಕ್ಕಿಂತ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.