ಡೆಹ್ರಾಡೂನ್,ಮಾ.೨೩- ಉತ್ತರಾಖಂಡ್ನ ಕೇದಾರನಾಥದಲ್ಲಿ ಸುರಿಯುತ್ತಿರುವ ಹಿಮಪಾತದಿಂದಾಗಿ ಹಿಮಬಂಡೆಗಳು ಒಡೆದು ಬಿದ್ದ ಘಟನೆ ನಡೆದಿದೆ.
ಕೇದಾರನಾಥದ ಮೂರು ಸ್ಥಳಗಳಲ್ಲಿ ಮಂಜುಗಡ್ಡೆಯ ತುಂಡುಗಳು ಮುರಿದು ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಕೇದಾರನಾಥ ಕಾಲುದಾರಿಯ ಮೇಲೆ ಬೃಹತ್ ಹಿಮನದಿಗಳು ಹರಿದಿವೆ.
ರಸ್ತೆ ಮೇಲೆ ಹಿಮದ ತುಂಡುಗಳು ಬಿದ್ದಿರುವುದು ಹಲವು ಸಮಸ್ಯೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಬಿದ್ದಿದ್ದ ಹಿಮದ ರಾಶಿಯನ್ನು ಕೂಲಿಕಾರ್ಮಿಕರು ಹಾಗೂ ಅಲ್ಲಿನ ನಿವಾಸಿಗಳು ಸೇರಿ ತೆರವುಗೊಳಿಸಿದ್ದರು.
೨ ದಿನಗಳ ಹಿಂದೆ ಕೇದಾರನಾಥದ ಭೈರವ್ ಗಡೇರಾದಲ್ಲಿ ಹಿಮನದಿ ಒಡೆದಿದ್ದರಿಂದ ಸಾಕಷ್ಟು ಹಾನಿ ಸಂಭವಿಸಿತ್ತು. ಹಿಮನದಿಯ ಅಡಿಯಲ್ಲಿರುವ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆ ಬಂದ ಹಿಮನದಿಗಿಂತ ಈ ಬಾರಿ ಬಂದಿರುವ ಹಿಮನದಿಗಳು ತುಂಬಾ ದೊಡ್ಡದಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ಸಾಬೀತಾಗಿದೆ.
ಗೌರಿಕುಂಡ್‌ನಿಂದ ಲಿಂಚೋಲಿ ನಡುವಿನ ಸುಮಾರು ೮ ರಿಂದ ೯ ಕಿಲೋಮೀಟರ್‌ಗಳ ಪ್ಯಾಚ್ ಹಲವೆಡೆ ಹಾನಿಗೊಳಗಾಗಿದ್ದು ಮಾತ್ರವಲ್ಲದೆ, ಹಿಮನದಿಯ ಆಗಮನದಿಂದಾಗಿ, ಬೃಹತ್ ಮಂಜುಗಡ್ಡೆಗಳು ರಸ್ತೆಗೆ ಬಂದಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.
ಕೇದಾರನಾಥ ಧಾಮದಲ್ಲಿ ಇನ್ನೂ ೨ ರಿಂದ ೩ ಅಡಿಗಳಷ್ಟು ಹಿಮ ಹೆಪ್ಪುಗಟ್ಟಿರುವ ಕಾರಣ ಶೀಘ್ರದಲ್ಲೇ ಹಿಮವನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದ. ಕೇದಾರನಾಥ ಮತ್ತು ಮೇಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಬಹುದು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಅಲ್ಲದೇ, ರಾಜ್ಯದ ಬಹುತೇಕ ಭಾಗಗಳಲ್ಲಿ ಹಗುರ ಮತ್ತು ಭಾರಿ ಮಳೆಯಾಗಲಿದೆ. ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆ ಹೆಚ್ಚಾಗಿದೆ.