ಕೇಜ್ರಿ ಬಂಧನಕ್ಕೆ ಆಕ್ರೋಶ: ಮೋದಿ ನಿವಾಸಕ್ಕೆ ಮುತ್ತಿಗೆ ಹಲವರ ಬಂಧನ

ಸಿಎಂ ತಲೆ ದಂಡಕ್ಕೆ ಬಿಜೆಪಿ ಆಗ್ರಹ

ನವದೆಹಲಿ,ಮಾ.೨೬:ಮದ್ಯ ನೀತಿ ಹಗರಣ ಕುರಿತಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್‌ಆದ್ಮಿ ಪಾರ್ಟಿ ಮತ್ತು ಭಾರತೀಯ ಜನತಾಪಕ್ಷದ ನಡುವೆ ಸಂಘರ್ಷ ತಾರಕಕ್ಕೇರಿದೆ. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಆಪ್ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರನ್ನು ಪಟೇಲ್‌ಚೌಕ್‌ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಮತ್ತೊಂದೆಡೆ ಬಿಜೆಪಿ ಆಪ್ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಬಂಧನಕ್ಕೊಳಗಾಗಿದ್ದರೂ ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಿರುವುದಕ್ಕೆ ನಾಚಿಕೆಯಾಗಬೇಕು, ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಆಪ್‌ಗೆ ತಿರುಗೇಟು ನೀಡಿದೆ.
ಕಳೆದ ಗುರುವಾರ ಕೇಜ್ರಿವಾಲ್ ಅವರನ್ನು ತಮ್ಮ ನಿವಾಸದಲ್ಲೇ ಜಾರಿನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಈಗ ಅವರು ಜಾರಿನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾರೆ.
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಆಮ್ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಬಂಧಿಸಿರುವುದು ಆಮ್ ಆದ್ಮಿ ಪಕ್ಷ ಕೇಂದ್ರದ ವಿರುದ್ಧ ಕಿಡಕಾರಿದೆ.
ಈ ತಿಂಗಳ ೩೧ ರಂದು ಪ್ರತಿಭಟನೆಗೆ ಕರೆ ನೀಡಿದ್ದು, ಇಂಡಿಯಾ ಮೈತ್ರಿಕೂಟದ ಎಲ್ಲ ಪಕ್ಷಗಳು ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇದರ ಬೆನ್ನಲ್ಲೆ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಮಾರ್ಗಮಧ್ಯೆ ಪಟೇಲ್‌ಚೌಕ್‌ನಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ತಕ್ಷಣ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ಬಿಜೆಪಿ ತಿರುಗೇಟು
ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದರೂ ಜೈಲಿನಿಂದಲೇ ಆಡಳಿತ ನಡೆಸುತ್ರಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವರ್ತನೆ ಖಂಡಿಸಿ ಬಿಜೆಪಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಂಧನವಾಗಿದ್ದರೂ ಜೈಲಿನಲ್ಲಿದುಕೊಂಡೇ ಆಡಳಿತ ನಡೆಸುತ್ತಿರುವ ಕೇಜ್ರಿವಾಲ್ ಅವರಿಗೆ ನಾಚಿಕೆಯಾಗಬೇಕು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ದೆಹಲಿಯಲ್ಲಿ ಬಿಜೆಪಿ ಮತ್ತು ಆಪ್ ಪ್ರತಿಭಟನೆ ನಡೆಸುತ್ತಿದೆ. ಇದರಿಂದಾಗಿ ಜನರಿಗೆ ಕಿರಿಕಿರಿ ಉಂಟಾಗಿದೆ. ಅದರಲ್ಲು ವಾಹನ ಸವಾರರು ಪರದಾಡುವಂತಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ನಿವಾಸ ಸೇರಿದಂತೆ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಜೈಲಿನಿಂದಲೇ ಮತ್ತೊಂದು ಆದೇಶ
ಮೊನ್ನೆಯಷ್ಟೇ ಜೈಲಿನಿಂದಲೇ ದೆಹಲಿ ನಾಗರಿಕರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮಂತ್ರಿ ಅತಿಶಿಗೆ ಆದೇಶ ನೀಡಿದ ಬೆನ್ನಲ್ಲೆ ಇಂದು ಕೇಜ್ರಿವಾಲ್ ಅವರು ೨ನೇ ಆದೇಶವನ್ನು ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ೨ನೇ ಆದೇಶ ಹೊರಡಿಸಿರುವ ಮುಖ್ಯಮಂತ್ರಿಗಳು, ದೆಹಲಿಯ ಆರೋಗ್ಯದ ಬಗ್ಗೆ ಅವರಿಗೆ ಚಿಂತೆ ವ್ಯಕ್ತವಾಗಿದ್ದು, ತಾವು ಜೈಲು ಸೇರಿರುವುದರಿಂದ ಜನರಿಗೆ ಯಾವುದೇ ತೊಂದರೆಯಾಗಬಾರದು. ಹೀಗಾಗಿ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ದೆಹಲಿ ಆರೋಗ್ಯ ಸಚಿವ ಸೌರವ್‌ಭಾರದ್ವಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ರೋಗಗಳಿಗೆ ಸಂಬಂಧಪಟ್ಟಂತೆ ನಡೆಸುತ್ತಿರುವ ಪರೀಕ್ಷೆಗಳ ಬಗ್ಗೆ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.