ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ಮನೀಶ್ ಆರೋಪ

ನವದೆಹಲಿ,ನ.೨೫- ದೆಹಲಿಯ ಎಂಸಿಡಿ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಭೀತಿಯಿಂದ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಸಂಸದ ಹಾಗೂ ದೆಹಲಿ ಘಟಕದ ಬಿಜೆಪಿ ಮಾಜಿ ಅಧ್ಯಕ್ಷ ಮನೋಜ್ ತಿವಾರಿ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸುವಂತೆ ತಮ್ಮ ಗೂಂಡಾಗಳಿಗೆ ಬಹಿರಂಗವಾಗಿ ಕರೆ ನೀಡಿದ್ದಾರೆ ಎನ್ನುವ ಬಾಂಬ್ ಸಿಡಿಸಿದ್ದಾರೆ.
ಎರಡೂ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಪಕ್ಷ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಲು ಬಹಿರಂಗವಾಗಿ ಕೇಳುತ್ತಿದ್ದಾರೆ ಮತ್ತು ಅದಕ್ಕೆ ಸಂಪೂರ್ಣ ಯೋಜನೆ ಮಾಡಿದ್ದಾರೆ. ಇಂತಹ ಕ್ಷುಲ್ಲಕ ರಾಜಕೀಯಕ್ಕೆ ಎಎಪಿ ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿ ಮತ್ತು ಗುಜರಾತ್‌ನ ಜನತೆ ಬಿಜೆಪಿಯ ಗೂಂಡಾಗಿರಿಗೆ ಉತ್ತರ ನೀಡಲಿದ್ದಾರೆ ಈ ಎರಡು ರಾಜ್ಯಗಳಲ್ಲಿ ಎಎಪಿ ಪಕ್ಷಕ್ಕೆ ಬಾರಿ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡು ಮಟ್ಟಕ್ಕೆ ಬಿಜೆಪಿ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ.ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರು ಮಾಡುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ನಾಯಕರು ಬಳಸುವ “ಸಂಪೂರ್ಣ ಭಯಾನಕ” ಭಾಷೆ ಅವರು ದೆಹಲಿಯವರನ್ನು ಎಷ್ಟು ದ್ವೇಷಿಸುತ್ತಾರೆ ಮತ್ತು ದೆಹಲಿಯ ಜನರ ಭಾವನೆಗಳಿಗೆ ಅವರು ಹೇಗೆ ಗೌರವ ನೀಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ಧಾರೆ. ದೆಹಲಿಯ ೨ ಕೋಟಿ ಜನರಿಂದ ಚುನಾಯಿತರಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬಹಿರಂಗ ಬೆದರಿಕೆಗಳ ಮೂಲಕ ಬಿಜೆಪಿಂ ಜನಾದೇಶ ದಿಕ್ಕಿರಿಸುತ್ತಿದೆ ಎಂದು ಆರೋಪಿಸಿದ್ಧಾರೆ.