ಕೇಜ್ರಿವಾಲ್ ಬಂಧನ ರಾಷ್ಟ್ರಪತಿ ಮಧ್ಯಸ್ಥಿಕೆಗೆ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ರಾಯಚೂರು, ಮಾ.೩೧-
ಲೋಕಸಭೆ ಚುನಾವಣೆ ಹಿನ್ನಲೆ ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಮಾಡಿರುವುದನ್ನು ಖಂಡಿಸಿ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೇಂದ್ರ ಬಿಜೆಪಿ ಸರಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಬಂಧನ ಮಾಡಿರುವುದು ಸರಿಯಾದ ಕ್ರಮವಲ್ಲ ಈ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತನಗೆ ಭವಿಷ್ಯದಲ್ಲಿ ಎದುರಾಳಿಯಾಗಬಹುದಾದ ರಾಜಕೀಯ ಪಕ್ಷಗಳನ್ನು ಹಾಗೂ ನಾಯಕರನ್ನು ಕುತಂತ್ರದಿಂದ ಹತ್ತಿಕ್ಕುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಸೇರಿದಂತೆ ಎಲ್ಲ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೂ ಮೂಗುದಾರ ತೊಡಿಸಿ ತನ್ನ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಇದು ಅತ್ಯಂತ ಕಳವಳಕಾರಿ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಅಬಕಾರಿ ನೀತಿ ಹಗರಣದಲ್ಲಿ ಎಎಪಿ ಮುಖಂಡರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ನಿರಂತರವಾಗಿ ಮೋದಿ ಸರ್ಕಾರ ಕಿರುಕುಳ ನೀಡುತ್ತಿದೆ. ಅದರ ಭಾಗವಾಗಿ ಈಗಾಗಲೇ ಸತ್ಯೇಂದ್ರ ಜೈನ್, ಮನೀಷ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರನ್ನು ಈಗಾಗಲೇ ಬಂಧಿಸಿದೆ. ಆದರೂ ನಮ್ಮ ನಾಯಕರು ಸತ್ಯದ ಪರವಾಗಿ ದೃಢವಾಗಿ ನಿಂತರು. ಬಿಜೆಪಿಯ ಭಾಗವಾಗಲು ಒಪ್ಪಲಿಲ್ಲ. ಕೊನೆಯ ಅಸ್ತ್ರ ಎಂಬಂತ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಅರವಿಂದ ಕೇಜಿವಾಲ್ ಅವರನ್ನು ಬಂಧಿಸಲಾಗಿದೆ.
ಈ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ರಾಷ್ಟ್ರಪತಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿ. ವೀರೇಶಕುಮಾರ,ಕೆ. ಬಸವರಾಜ ಗುತ್ತೇದಾರ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.