ಕೇಕ್ ತಿಂದು ಬಾಲಕಿ ಸಾವು

ಪಟಿಯಾಲಾ, ಮಾ.೩೧-ತನ್ನ ಹುಟ್ಟುಹಬ್ಬ ಆಚರಣೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು ೧೦ ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಪಂಜಾಬ್‌ನ ಪಾಟಿಯಾದಲ್ಲಿ ಕಳೆದ ಭಾನುವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟಿಯಾಲದ ೧೦ ವರ್ಷದ ಬಾಲಕಿ ಮಾನ್ವಿ ಇದೇ ತಿಂಗಳ ೨೪ ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಪಟ್ಟಣದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದೆ. ಸಂಜೆ ೭ ಗಂಟೆಗೆ ಕುಟುಂಬಸ್ಥರೆಲ್ಲ ಸೇರಿ ಕೇಕ್ ಕತ್ತರಿಸಿ ಸವಿದಿದ್ದಾರೆ. ಆದರೆ ರಾತ್ರಿ ೧೦ ಗಂಟೆಗೆ ಕುಟುಂಬದ ಎಲ್ಲ ಸದಸ್ಯರು ಅಸ್ವಸ್ಥರಾಗಿದ್ದಾರೆ ಎಂದು ಮಾನ್ವಿ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ.
ಕೇಕ್ ತಿಂದ ಇಬ್ಬರು ಬಾಲಕಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ .ಮಾನ್ವಿ ನೀರು ಕೇಳಿದ್ದಾಳೆ, ತೀವ್ರ ಬಾಯಾರಿಕೆ ಆಗುತ್ತಿದೆ ಎಂದು ನೀರು ಕುಡಿದು ನಿದ್ದೆಗೆ ಜಾರಿದ್ದಾಳೆ. ಬೆಳಗಿನ ಜಾವ ಆಕೆಯ ಸ್ಥಿತಿ ಹದಗೆಟ್ಟಿದ್ದು, ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರ ಪ್ರಯತ್ನದ ಹೊರತಾಗಿಯೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಕೇಕ್ ಕನ್ಹಾದಿಂದ ಆರ್ಡರ್ ಮಾಡಿದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶಗಳಿವೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಕೇಕ್ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಕುಟುಂಬ ಸಮೇತ ಕೇಕ್ ಕಟ್ ಮಾಡಿ ಖುಷಿಯಾಗಿದ್ದ ಬಾಲಕಿ ಇಹಲೋಕ ತ್ಯಜಿಸಿದ್ದು ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಸಾಯುವ ಕೆಲವೇ ಗಂಟೆಗಳ ಮೊದಲು, ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು ವ್ಯಾಪಕವಾಗಿ ವೈರಲ್ ಆಗುತ್ತಿದೆ.