ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಲು ಸೂಚನೆ

ಗದಗ,ಜೂ8 : ಗದಗ ಜಿಲ್ಲೆಗೆ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಜೂನ್ 14 ರಿಂದ 16 ರವರೆಗೆ ಭೇಟಿ ನೀಡಲಿದ್ದು ಈ ಸಂದರ್ಭದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಪಲೋಕಾಯುಕ್ತರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹಾಗೂ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ ಎಂದರು.
ಜಿಲ್ಲಾ ಹಂತದ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ನಿರ್ವಹಿಸುವ ಕಾರ್ಯಗಳನ್ನು ಸರಿಯಾಗಿ ನಿಭಾಯಿಸಬೇಕು. ಕಚೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸಿ ಕಚೇರಿಯ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಬೇಕು ಅಲ್ಲದೇ ಕಚೇರಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸೌಜನ್ಯದಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆದುಕೊಳ್ಳಬೇಕು.ಉಪಲೋಕಾಯುಕ್ತರು ನಡೆಸುವ ಸಭೆಗೆ ಇಲಾಖೆಯ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿದ್ದು ತಮ್ಮ ಇಲಾಖೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಆಗಮಿಸಬೇಕು. ಇಲಾಖೆಗೆ ಸಂಬಂಧಿಸಿದ ಬಾಕಿ ಪ್ರಕರಣಗಳ ಕುರಿತು ಅಗತ್ಯ ದಾಖಲೆಗಳೊಂದಿಗೆ ವಿಚಾರಣೆ ಸಂದರ್ಭದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಹಾಸ್ಟೆಲ್‍ಗಳು, ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳು, ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಸಂಬಂಧಿತ ಅಧಿಕಾರಿಗಳು ನಿಗಾ ವಹಿಸಬೇಕು. ಲೋಕಾಯುಕ್ತರ ಭೇಟಿ ಸಂದರ್ಭದಲ್ಲಿ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಕಚೇರಿಯಲ್ಲಿ ಇರುವಂತೆ ನೋಡಿಕೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ಸಕಾಲದಡಿ ಸ್ವೀಕೃತವಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು. ಐಪಿಜಿಆರೆಸ್, ಮುಖ್ಯಮಂತ್ರಿಗಳ ಜನತಾ ದರ್ಶನದಡಿ ಸ್ವೀಕೃತವಾಗಿರುವ ಅರ್ಜಿಗಳನ್ನು ಪ್ರಥಮಾದ್ಯತೆ ನೀಡಿ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ಕಚೇರಿಗಳಲ್ಲಿಯೂ ಲೋಕಾಯುಕ್ತರ ಸೂಚನಾ ಫಲಕ ಅಳವಡಿಸಬೇಕು ಎಂದು ಸೂಚಿಸಿದರು.
ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು. ಹಾಜರಾತಿಗಾಗಿ ಬಯೋಮೆಟ್ರಿಕ್ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಕಚೇರಿಗಳಲ್ಲಿ ಚಲನವಲನ ವಹಿ ಮತ್ತು ನಗದು ವಹಿ ಕಡ್ಡಾಯವಾಗಿ ನಿರ್ವಹಿಸಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.