ಕೇಂದ್ರ ಸರ್ಕಾರ ರೈತಪರ: ಸೋಮಣ್ಣ

ಹುಲಸೂರ:ಏ.05: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿವೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದ ಅಲ್ಲಮಪ್ರಭು ಮಠದ ಸಭಾಭವನದಲ್ಲಿ ಭಾನುವಾರ ನಡೆದ ಹುಲಸೂರ ಹಾಗೂ ನಾರಾಯಣಪುರ ಬಿಜೆಪಿ ಬೂತ್‌ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಬಡವರಿಗೆ 10 ಲಕ್ಷ ಮನೆ ನೀಡುವ ಯೋಜನೆ ಹೊಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸೂರು ಇಲ್ಲದವರಿಗೆ ಸೂರು ನೀಡುವ ಯೋಜನೆ ಹಮ್ಮಿಕೊಂಡಿದ್ದಾರೆ. ಅರ್ಹರನ್ನು ಗುರುತಿಸಿ ಮನೆ ನೀಡುವ ವ್ಯವಸ್ಥೆ ಆಗಬೇಕು’ ಎಂದು ಹೇಳಿದರು.

‘ಉಪ ಚುನಾವಣೆಯ ನಮ್ಮ ಪಕ್ಷದ ಅಭ್ಯರ್ಥಿ ಶರಣು ಸಲಗರ ಕ್ರಿಯಾಶೀಲರಾಗಿದ್ದು, ಅವರು ಗೆದ್ದರೆ ಹುಲಸೂರ ಮತ್ತು ಬಸವಕಲ್ಯಾಣ ಅಭಿವೃದ್ಧಿಪಡಿಸುತ್ತಾರೆ. ಅವರನ್ನು ಗೆಲ್ಲಿಸುವ ಕಾರ್ಯ ನೀವೆಲ್ಲರೂ ಮಾಡಬೇಕು’ ಎಂದರು.ಸಚಿವ ಪ್ರಭು ಚವ್ಹಾಣ ಮಾತನಾಡಿ, ‘ಈ ಭಾಗದಲ್ಲಿ ಕಾಂಗ್ರೆಸ್‌ ಮುಕ್ತವಾಗಲಿದೆ. ಜಿಲ್ಲೆಯಿಂದ ಗೆಳೆಯ ಶರಣು ಸಲಗರ ಕೂಡ ಶಾಸಕನಾಗಿ ನನ್ನ ಜೊತೆ ವಿಧಾನಸೌಧಕ್ಕೆ ಬರುವರು. ನಾವಿಬ್ಬರು ಜೋಡೆತ್ತುಗಳಂತೆ ಅಭಿವೃದ್ಧಿ ಮಾಡುತ್ತೇವೆ’ ಎಂದರು.
ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ದತ್ತು ತೂಗಾಂವಕರ ಮಾತನಾಡಿ, ‘ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು’ ಎಂದರು.

ಬಿಜೆಪಿ ಬಸವಕಲ್ಯಾಣ ತಾಲ್ಲೂಕು ಗ್ರಾಮಿಣ ಘಟಕದ ಅಧ್ಯಕ್ಷ ಅಶೋಕ ವಕಾರೆ ಪ್ರಾಸ್ತಾವಿಕ ಮಾತನಾಡಿದರು. ಕಿರಣ ಪಾಟೀಲ ಸ್ವಾಗತಿಸಿದರು.

ಶಾಸಕ ಬಸವರಾಜ ಮತ್ತಿಮೂಡ, ಶಿವರಾಜ ಗಂದಗೆ, ಗುಂಡುರಡ್ಡಿ, ಅನೀಲ ಭೂಸಾರೆ, ಸುಧೀರ ಕಾಡಾದಿ, ಲತಾ ಹಾರಕುಡೆ, ಪ್ರದೀಪ ವಾತಡೆ, ಸೂರ್ಯಕಾಂತ ಚಿಲ್ಲಾಬಟ್ಟೆ , ಅಣ್ಣಾರಾವ ಪಾಟೀಲ, ಹುಲಸೂರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ ಹರಿಪಲ್ಲೆ, ರಮೇಶ ಪಾಟೀಲ, ನಾರಾಯಣಪೂರ ಶಕ್ತಿಕೇಂದ್ರ ಅಧ್ಯಕ್ಷ ರಾಜು ರಡ್ಡಿ , ಮಹೇಶ ಬಿರಾದಾರ, ದೇವಿಂದ್ರ ಭೋಪಳೆ, ನಾಗೇಶ ಮೇತ್ರೆ, ಸಂಗಮೇಶ ಭೋಪಳೆ ಇದ್ದರು.