ರಾಯಚೂರು,ಜೂ.೨೯-
ರಾಜ್ಯ ಸರಕಾರ ಬಡವರಿಗೆ ಹೆಚ್ಚುವರಿಯಾಗಿ ತಲಾ ಐದು ಕೇಜಿ ಅಕ್ಕಿ ನೀಡುವ ಯೋಜನೆಯಲ್ಲಿ
ಅಕ್ಕಿ ದೊರೆಯದಂತೆ, ಈಗಲೂ ರಾಜಕೀಯ ಮಾಡುತ್ತಿರುವ,ಒಕ್ಕೂಟ ಸರಕಾರ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನ ಬಡವರ ವಿರೋಧಿ ನಿಲುಮೆಯನ್ನು ಸಿಪಿಐಎಂ ರಾಯಚೂರು ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಕೆ.ಜಿ ವೀರೇಶ ಹೇಳಿದರು.
ಅಕ್ಕಿ ದೊರೆಯದ ಕಾರಣಕ್ಕೆ ಅಕ್ಕಿದೊರೆಯುವವರೆಗೆ ನಗದು ನೀಡಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆಯೆಂಬ ಹೇಳಿಕೆಯನ್ನು ಸಿಪಿಐಎಂ ಸ್ವಾಗತಿಸುತ್ತದೆ. ಆದರೆ, ಇದನ್ನೇ ನೆಪ ಮಾಡಿ ನಗದು ವರ್ಗಾವಣೆಯನ್ನೇ ನೀತಿಯಾಗಿ ಮಾಡಿಕೊಳ್ಳಬಾರದು ಎಂದ ಅವರು,ನಗದು ವರ್ಗಾವಣೆಯು ಬಿಪಿಎಲ್ ಕಾರ್ಡದಾರರ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಅಗತ್ಯವಾಗಿದೆಯೆಂದು ಸೂಚಿಸಿದೆ.
ರಾಜ್ಯ ಸರಕಾರ ರಾಜ್ಯದ ಓಪನ್ ಮಾರುಕಟ್ಟೆಯಲ್ಲಿ ಭತ್ತವನ್ನು ಖರೀದಿಸಿ, ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದ ಆಧುನಿಕ ರೈಸ್ ಮಿಲ್ ನಿರ್ಮಿಸಿ ಅಕ್ಕಿ ಉತ್ಪಾದನೆಯಲ್ಲಿ ತೊಡಗುವ ಕಡೆ ಚಿಂತಿಸಿ ಕಾರ್ಯ ಪ್ರವೃತ್ತವಾಗುವುದು ಅಗತ್ಯವಿದೆಯೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.