
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೭; ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಈ ದೇಶದ ದುಡಿಯುವ ವರ್ಗಗಳಾದ ರೈತ ಮತ್ತು ಕಾರ್ಮಿಕರ ಪರವಾಗಿ ಕಾನೂನುಗಳನ್ನು ಜಾರಿಗೆ ತರುವ ಬದಲು ಬಂಡವಾಳ ಶಾಹಿ ಏಕಸ್ವಾಮ್ಯ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ದಾವಣಗೆರೆ ಜಿಲ್ಲಾ ಸಮಿತಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್ ಕೇಂದ್ರ ಸರ್ಕಾರ ಈ ಮೊದಲು ಇದ್ದಂತಹ ರೈತ ಮತ್ತು ಕಾರ್ಮಿಕರ ಪರವಾದ ಕಾನೂನುಗಳನ್ನು ಕಿತ್ತುಹಾಕುತ್ತಿದೆ, ರೈತ ವಿರೋಧಿಯಾದ ಕೃಷಿ ಮಸೂದೆಯನ್ನು ಜಾರಿಗೆ ತಂದು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲಮಾಡಿ ಕೊಟ್ಟಿದೆ ಎಂದು ಕಿಡಿಕಾರಿದರು.ದೆಹಲಿಯ ಹೊರವಲಯದಲ್ಲಿ ನಡೆದ ರಾಜಿರಹಿತ ಹೋರಾಟದಿಂದಾಗಿ ಕೆಂದ್ರ ಸರ್ಕಾರವು ತಾತ್ಕಾಲಿಕವಾಗಿ ಹಿಂಪಡೆದು ಈಗ ಮತ್ತೆ ಜಾರಿಗೊಳಿಸಲು ಹೊರಟಿದೆ. ಇದಲ್ಲದೇ ಕಾರ್ಮಿಕ ವಿರೋಧಿ ನಾಲ್ಕು ಮಸೂದೆಯನ್ನು ಜಾರಿಗೊಳಿಸಿದರ ಪರಿಣಾಮವಾಗಿ ಕಾರ್ಖಾನೆ ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಕೆ ಮಾಡಿ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಸಿದೆ ಈ ಎಲ್ಲಾ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಇದರ ಅಂಗವಾಗಿ ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳವಳಿಯ ದಿನದಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಹಮ್ಮಿಕೊಂಡಿದೆ. ಅದರ ಪೂರ್ವಭಾವಿಯಾಗಿ ದಾವಣಗೆರೆಯ ಅಂಬೇಡ್ಕರ್ ಸರ್ಕಲ್ ನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ಪ್ರೊ.ಎ.ಬಿ.ರಾಮಚಂದ್ರಪ್ಪ ತಿಳಿಸಿದರು.ಈ ವೇಳೆ ಕೆ.ಹೆಚ್.ಆನಂದರಾಜ್, ಶ್ರೀನಿವಾಸ್, ಸತೀಶ್ ಅರವಿಂದ, ಮಧು ತೊಗಲೇರಿ, ಐರಣಿ ಚಂದ್ರು, ಅಭಿಷೇಕ್, ತಿಪ್ಪೇಶ್ ಆವರಗೆರೆ, ಪವಿತ್ರಾ,ಆದಿಲ್ ಖಾನ್, ಬಾನಪ್ಪ, ದಿವಾಕರಚಾರಿ ಇತರರು ಇದ್ದರು.