ಕೇಂದ್ರ ಸರ್ಕಾರದಿಂದ ಬಡವರ, ಮಧ್ಯಮವರ್ಗದವರಿಗೆ ಅನ್ಯಾಯ


ದಾವಣಗೆರೆ.ಜು.೨೦: ಆಹಾರ ಉತ್ಪನ್ನ ಸೇರಿದಂತೆ ಬೇರೆ ಬೇರೆ ವಸ್ತುಗಳ ಮೇಲಿನ ತೆರಿಗೆ, ಜಿ. ಎಸ್. ಟಿ.  ವಿಧಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಹೃದಯವಿಲ್ಲದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರದಲ್ಲಿ ನಂಬರ್ ಒನ್ ಕರ್ನಾಟಕ.‌ ಇದೇ ಬಿಜೆಪಿ ಸಾಧನೆ  ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚೆ ದಿನ್ ಎಂದು ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಬಡವರ, ಮಧ್ಯಮವರ್ಗದವರ ಮೇಲೆ ಗಧಾ ಪ್ರಹಾರ ನಡೆಸುತ್ತಿದೆ. ರಾಜ್ಯದ ಸಂಸದರು ತೆರಿಗೆ ಹೆಚ್ಚಿಸಿದ್ದರೂ, ಪ್ರವಾಹ ಪೀಡಿತ ಪ್ರದೇಶಗಳ ಜನರು ಸಂಕಷ್ಟದಲ್ಲಿದ್ದಾರೆ. ಆದ್ರೆ ಯಾವ ಲೋಕಸಭಾ ಸದಸ್ಯರು ಬಾಯಿ ಬಿಡುತ್ತಿಲ್ಲ. ರಾಜ್ಯ ಸಚಿವರು ದೊಡ್ಡ ತಿಮಿಂಗಲಗಳಿದ್ದಾರೆ. ಅವರು ಜಾಸ್ತಿ ಹಣ ಮಾಡಿದರು, ನಾವು ಮಾಡಬೇಕು ಎಂಬ ಹಪಾಹಪಿತನ ಇದೆ. ಜನರ ಹಿತ, ಕಾಳಜಿ ಬೇಕಾಗಿಲ್ಲ ಎಂದು ಕಿಡಿಕಾರಿದರು‌.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ವಲ್ಪ ಬೆಲೆ ಏರಿಕೆಯಾದರೂ ಶೋಭಾ ಕರಂದ್ಲಾಜೆ, ಮಾಳವಿಕಾ ಅವಿನಾಶ್, ಶೃತಿ, ಸ್ಮುರ್ತಿ ಇರಾನಿ ಸೇರಿದಂತೆ ಬಿಜೆಪಿ ನಾಯಕಿರು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು. ಯಾಕೆ ಈಗ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.ಬೇಳೆ, ಎಣ್ಣೆ, ಗೋಧಿ, ಅಕ್ಕಿ ಹಿಟ್ಟು, ಸಿಲಿಂಡರ್, ಅಕ್ಕಿ, ಹಾಲು, ಮೊಸರು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದೇನಾ ಅಚ್ಚೆ ದಿನ್. ಮಹಿಳೆಯರು ಬಿಜೆಪಿ ಸರ್ಕಾರದ ಲೂಟಿ ವಿರೋಧಿಸಿ ಬೀದಿಗೆ ಬರುತ್ತಾರೆ. ಒಳ್ಳೆಯ ಸರ್ಕಾರ ತರುತ್ತಾರೆ ಎಂಬ ವಿಶ್ವಾಸ ಇದೆ. ಲೂಟಿ ಸರ್ಕಾರವನ್ನು ನಾವು ನೋಡೇ ಇಲ್ಲ ಎಂಬುದಾಗಿ ಮಠಾಧೀಶರೇ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕಿದೆ. ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು‌.ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಉಗ್ರವಾದ ಪ್ರತಿಭಟನೆ ನಡೆಸುತ್ತದೆ. ಬಿಜೆಪಿ ಸರ್ಕಾರದ ವೈಫಲ್ಯ ಹೇಳುತ್ತಾ ಹೋದರೆ ಸಾಲದು. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಕೋಮುಗಲಭೆ ಹುಟ್ಟು ಹಾಕುವ ಬದಲು, ಜಾತಿ ಜಾತಿಗಳ ಮಧ್ಯೆ ಸಂಘರ್ಷ ಮಾಡುವುದನ್ನು ಬಿಟ್ಟು ಬೆಲೆಯೇರಿಕೆ ನಿಯಂತ್ರಿಸಲಿ ಎಂದು ಹೇಳಿದ ಅವರು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಜಿಎಸ್ ಟಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವಂಥ ಶಕ್ತಿ ಇರುವ ಮಹಿಳೆಯರಿಗೆ ಟಿಕೆಟ್ ಕೊಡಿಸಲು ಶಕ್ತಿ‌ಮೀರಿ ಪ್ರಯತ್ನ ಮಾಡುತ್ತೇನೆ. ಚುನಾವಣೆಯಲ್ಲಿ ಸುಮ್ಮನೆ ನಿಂತರೆ ಸಾಲದು. ಪೈಪೋಟಿ ನೀಡುವಂಥವರಿಗೆ ಗುರುತಿಸಿ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು‌.ಮಹಿಳಾ ಸಂಘಟನೆ ಬಲಿಷ್ಠಗೊಳಿಸಬೇಕು. ಚುನಾವಣೆಗೆ ಇನ್ನು ಎಂಟು ತಿಂಗಳಿದೆ. ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ ಯಾವ ಮಹಿಳೆಯು ವಿಧಾನಸಭಾ ಕ್ಷೇತ್ರಕ್ಕೆ ಕಣಕ್ಕಿಳಿಯುವ ಆಕಾಂಕ್ಷಿಗಳಿಲ್ಲ‌.‌ಇನ್ನು ಮೂರು ತಿಂಗಳ ಬಳಿಕ ಈ ಪ್ರಕ್ರಿಯೆ ಶುರುವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಾಟೀಲ್, ಸುಮಂಗಳಾ ಮತ್ತಿತರರು ಹಾಜರಿದ್ದರು. Attachments area