ಕೇಂದ್ರ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ : ಬಿ.ಆರ್.ಪಾಟೀಲ ವಾಗ್ದಾಳಿ

ಕಲಬುರಗಿ,ಜ.12-ರೈತ ವಿರೋಧಿ ಕೃಷಿ ಮಸೂದೆಗಳ ವಾಪಸಾತಿ ಪಡೆಯುವಂತೆ ಆಗ್ರಹಿಸಿ ರೈತರ ಹೋರಾಟ ತಿಂಗಳಿನಿಂದ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿರುವುದು ದೇಶದ ದುರಂತ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಟೀಕಿಸಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಕ್ಕೆ ಬೆಂಬಲಿಸಿ ಆಳಂದ ತಾಲೂಕಿನ ಕಡಗಂಚಿಯಿಂದ ಆಳಂದ ಪಟ್ಟವರೆಗೆ ಹಮ್ಮಿಕೊಂಡ ಬೈಕ್ ರ್ಯಾಲಿಗೆ ಚಾಲನೆ ನೀಡಿ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ತಿಂಗಳುಗಟ್ಟಲೇ ರೈತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಎಳ್ಳಷ್ಟು ಕನಿಕರ ತೋರಿಸದಿರುವುದು ಕಣ್ಣು ಇಲ್ಲ – ಕಿವಿ ಇಲ್ಲ ಎಂಬುದು ನಿರೂಪಿಸುತ್ತದೆ. ಇಡೀ ದೇಶದ ರೈತರು ರೊಚ್ಚಿಗೆದ್ದು ಅಸಹಕಾರ ಚಳುವಳಿಯಾಗುವುದನ್ನು ತಪ್ಪಿಸಬೇಕೆಂದರು.
ಈ ಹಿಂದೆ ರೈತರ ಅನೇಕ ಹೋರಾಟಗಳು ನಡೆದಿವೆ. ಇಷ್ಟೊಂದು ನಿಟ್ಟಿನಲ್ಲಿ ಯಾವುದೇ ಸರಕಾರ ಮೊಂಡತನ ಹಾಗೂ ಹಠ ಸಾಧಿಸಿಲ್ಲ. ಪ್ರಧಾನಮಂತ್ರಿ ಹಾಗೂ ಪ್ರಮುಖ ಸಚಿವರಿಗೆ ರೈತರ ಹಿತಾಸಕ್ತಿಗಿಂತ ಉದ್ಯಮಿಗಳಾದ ಅದಾನಿ, ಅಂದಾನಿ ಮತ್ತಿತರರ ಹಿತ ಕಾಪಾಡುವುದೇ ಆಗಿದೆ. ಜನಪರ ಸರ್ಕಾರ ಹೋಗಿ ಉದ್ಯಮಿಪರ ಸರ್ಕಾರವಾಗಿದೆ ಎಂದು ಬಿ.ಆರ್ ವಾಗ್ದಾಳಿ ನಡೆಸಿದರು.
ರೈತರಿಗೆ ಯಾರು ತಮ್ಮ ಹಿತ ಕಾಪಾಡುವರು ಎಂಬುದು ಈಗ ಮನವರಿಕೆಯಾಗಿದೆ. ಹೀಗಾಗಿಯೇ ದೇಶದ ಮೂಲೆ- ಮೂಲೆಗಳಿಂದ ಲಕ್ಷಾಂತರ ರೈತರು ನವದೆಹಲಿಯತ್ತ ಧಾವಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಡುಕ ಶುರುವಾಗಿದೆ. ಏನೇ ಆದರೂ ಕೃಷಿ ಮಸೂದೆಗಳು ವಾಪಸ್ಸು ಪಡೆಯುವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಹಣಮಂತ ಭೂಸನೂರ ಮಾತನಾಡಿ, ಬೈಕ್ ರ್ಯಾಲಿಗೆ ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ ಎಂದರು.
ಆಳಂದ ತಾಲೂಕಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶರಣು ಭೂಸನೂರ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದರಾಮ ಪ್ಯಾಟಿ,ಮುಖಂಡರಾದ ಗಣೇಶ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.