ಕೇಂದ್ರ ಸಚಿವ ಭಗವಂತ ಖೂಬಾಗೆ ಸುಳ್ಳೆ ಮನೆ ದೇವರು: ಖಂಡ್ರೆ ಆರೋಪ

ಭಾಲ್ಕಿ: ನ.12:’ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲವೆಂದು ರಸಗೊಬ್ಬರ ಖಾತೆ ರಾಜ್ಯ ಸಚಿವರು ಹೋದ ಕಡೆಯಲ್ಲೆಲ್ಲಾ ಹೇಳುತ್ತಿದ್ದಾರೆ. ಹಾಗಿದ್ದರೇ ಗೊಬ್ಬರದ ಅಂಗಡಿಗಳ ಮುಂದೆ ರೈತರು ದಿನವಿಡೀ ಸಾಲಿನಲ್ಲಿ ನಿಲ್ಲುತ್ತಿರುವುದು ಏಕೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.’ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. 2008ರಲ್ಲಿ ಅಧಿಕಾರಕ್ಕೆ ಬಂದಾಗ ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಲಾಗಿತ್ತು. ಈಗ ಗೊಬ್ಬರ ಅಭಾವ ಇರುವುದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಸುಳ್ಳು ಹೇಳಿ ರೈತರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ. ಸುಳ್ಳು ಹೇಳುವುದರಲ್ಲಿ ಕೇಂದ್ರ ಸಚಿವರು ನಿಸ್ಸೀಮರು. ಇದಕ್ಕೆ ಇತಿಮಿತಿ ಇರಬೇಕು’ ಎಂದು ಪ್ರಕಟಣೆಯಲ್ಲಿ ಅವರು ಆಕ್ಷೇಪಿಸಿದ್ದಾರೆ.

ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ ಯೂರಿಯಾ ಬೇಡಿಕೆ 1.21 ಲಕ್ಷ ಟನ್ ಇದ್ದು, 3.69 ಲಕ್ಷ ಟನ್ ದಾಸ್ತಾನಿದೆ. 0.33 ಲಕ್ಷ ಟನ್ ಡಿಎಪಿ ಬೇಡಿಕೆ ಪೈಕಿ 0.71 ಲಕ್ಷ ಟನ್ ಸಂಗ್ರಹ ಇದೆ ಎಂದು ಕೇಂದ್ರ ರಸಗೊಬ್ಬರ ಇಲಾಖೆಯ ವೆಬ್ ಸೈಟ್ ಹೇಳುತ್ತಿದೆ. ಇಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದ ಗೊಬ್ಬರ ಎಲ್ಲಿಗೆ ಹೋಯಿತು? ಕಾಳಸಂತೆ ಸೇರಿತೆ? ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನೂ ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಬೇಡಿಕೆ ಇದ್ದರೂ ಸಮರ್ಪಕವಾಗಿ ಸಿಗುತ್ತಿಲ್ಲ. ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್ ರಸಗೊಬ್ಬರ ಬಳಸುವಂತೆ ರೈತರ ಮನವೊಲಿಸಲಾಗುತ್ತಿದೆ. ಬೇಡಿಕೆ ಗಿಂತ ಹೆಚ್ಚಿನ ಡಿಎಪಿ ಇದ್ದಲ್ಲಿ ರೈತರಿಗೆ ಏಕೆ ಪೂರೈಕೆ ಮಾಡುತ್ತಿಲ್ಲ? ಬರಿ ಕಾಗದ, ವೆಬ್ ಸೈಟ್, ಮುಗಿಲಲ್ಲಿ ಇದೆ ಎಂದು ಸುಳ್ಳು ಹೇಳಿದರೆ ಪ್ರಯೋಜನವಿಲ್ಲ. ವಾಸ್ತವದಲ್ಲಿ ಕೃಷಿಕರಿಗೆ ಗೊಬ್ಬರ ಸಿಗುವಂತೆ ಕ್ರಮ ತೆಗೆದುಕೊಳ್ಳಿ ಎಂದು ಅವರು ಆಗ್ರಹಿಸಿದರು.

ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ರಸಗೊಬ್ಬರ ಕೊರತೆ ಇದ್ದು, ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟದ ಬಗ್ಗೆ ದೂರು ಬಂದಿವೆ. ಜಿಲ್ಲಾಡಳಿತ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಸರ್ಕಾರ ಸಾಕಷ್ಟು ದಾಸ್ತಾನಿದೆ ಎಂದು ಸುಳ್ಳು ಹೇಳುತ್ತಿದೆ. ರಸಗೊಬ್ಬರ ಖಾತೆಯ ರಾಜ್ಯ ಸಚಿವರಿಗೆ ಸುಳ್ಳೇ ಮನೆ ದೇವರು ಎಂದು ಈಶ್ವರ ಖಂಡ್ರೆ ಅವರು ವ್ಯಂಗ್ಯವಾಡಿದ್ದಾರೆ.