ಕೇಂದ್ರ ಸಚಿವ ಭಗವಂತ ಖೂಬಾಗೆ ಡಾ.ಸಾರಂಗಧರ ಶ್ರೀ ಆಶೀರ್ವಾದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿ

ಕಲಬುರಗಿ:ನ.20:ಕಲ್ಯಾಣ ಕರ್ನಾಟಕ ಭಾಗದಿಂದ ಕೇಂದ್ರ ಸಚಿವರಾಗಿದ್ದು, ಈ ಭಾಗದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ತರಲು ಶ್ರಮಿಸಬೇಕು ಎಂದು ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶನಿವಾರ ಮಠಕ್ಕೆ ಭೇಟಿ ನೀಡಿದ ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರಿಗೆ ಆಶೀರ್ವದಿಸಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದವರು ಸಚಿವರಾಗಿದ್ದು, ಖುಷಿಯ ವಿಚಾರ. ಈ ಭಾಗದಲ್ಲಿ ಹಲವು ಕಾರ್ಯಗಳು ಬಾಕಿ ಇದ್ದು, ಅವುಗಳನ್ನು ಶೀಘ್ರದಲ್ಲಿ ಈಡೇರಿಸಬೇಕು. ಮಠ, ಸ್ವಾಮೀಜಿಗಳು ಸದಾ ಜತೆಗಿರುವುದಾಗಿ ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಖೂಬಾ, ಸುಲಫಲ ಮಠ ಈ ಭಾಗದ ಬಡವರು, ನಿರ್ಗತಿಕರು, ಸಂಕಷ್ಟದಲ್ಲಿ ಇರುವವರ ಬೆನ್ನಿಗೆ ಸದಾ ನಿಂತಿದೆ. ಶ್ರೀಮಠದ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಹೇಳಿದರು.
ಸೊನ್ನದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀಗುರುಬಸವ ಸ್ವಾಮೀಜಿ ಉಪಸ್ಥಿತರಿದ್ದರು.