ಕೇಂದ್ರ ಸಚಿವ ಖೂಬಾ ವಿರುದ್ಧ ಮತ್ತೊಬ್ಬ ಶಾಸಕರ ದನಿ

ಬೀದರ್:ಆ.14: ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ ಖೂಬಾ ವಿರುದ್ಧ ಔರಾದ್ ಶಾಸಕ ಪ್ರಭು ಚವಾಣ್ ದನಿ ಎತ್ತಿದ ಬೆನ್ನಲ್ಲೇ ಜಿಲ್ಲೆಯ ಮತ್ತೊಬ್ಬ ಶಾಸಕ ಅದೇ ರೀತಿಯ ಮಾತುಗಳನ್ನಾಡಿದ್ದಾರೆ.

ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಖೂಬಾ ವಿರುದ್ಧ ನೇರವಾಗಿ ಏನನ್ನೂ ಹೇಳದಿದ್ದರೂ ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಮರಾಠ ಸಮುದಾಯಕ್ಕೆ ಸೇರಿದ ಮುಖಂಡರನ್ನು ಕಣಕ್ಕಿಳಿಸಬೇಕೆಂದು ಹೇಳುವುದರ ಮೂಲಕ ಖೂಬಾ ಅವರಿಗೆ ಮತ್ತೊಂದು ಅವಕಾಶ ನೀಡದಿರಿ ಎಂಬ ಮಾತುಗಳನ್ನು ಸೂಚ್ಯವಾಗಿ ಆಡಿದ್ದಾರೆ.

‘ಮರಾಠ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ. ಜಿಲ್ಲೆಯ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಬಿಜೆಪಿ ಗೆಲ್ಲಲು ಮರಾಠ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ. ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಎರಡು ತಾಲ್ಲೂಕುಗಳು ಈ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಈ ಭಾಗದಲ್ಲಿ ಮರಾಠ ಸಮುದಾಯದ 2.50 ಲಕ್ಷ ಮತಗಳು ಇವೆ. ಈ ಸಮುದಾಯದವರು ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಆದ್ದರಿಂದ ಅವರಿಗೆ ನ್ಯಾಯ ಒದಗಿಸಬೇಕಾಗಿದೆ’ ಎಂದು ಶರಣು ಸಲಗರ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕು. ಇಲ್ಲವೇ ಮರಾಠ ಸಮುದಾಯದ ಇತರೆ ಯಾರಿಗಾದರೂ ಅವಕಾಶ ಕೊಡಬೇಕೆಂದು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವಿ ಸಲ್ಲಿಸುವೆ. ಆದರೆ, ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಬಗ್ಗೆ ಏನೂ ಹೇಳಲಾರೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದಿದ್ದಾರೆ. ಪದ್ಮಾಕರ ಅವರು ಇತ್ತೀಚೆಗೆ ಮರಾಠ ಸಮಾಜದವರ ಸಭೆ ಕರೆದು, ಟಿಕೆಟ್‍ಗೆ ಹಕ್ಕೊತ್ತಾಯ ಮಾಡಿದ್ದಾರೆ. ಆ ಸಭೆಯಲ್ಲಿ ಶರಣು ಸಲಗರ ಭಾಗವಹಿಸಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ನನ್ನ ಕೊಲೆಗೆ ಕೇಂದ್ರ ಸಚಿವ ಭಗವಂತ ಖೂಬಾ ಸಂಚು ರೂಪಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ ಕಾಂಗ್ರೆಸ್‍ನವರನ್ನು ಬೆಳೆಸಿ ಬಿಜೆಪಿಗೆ ದ್ರೋಹ ಬಗೆಯುತ್ತಿದ್ದಾರೆ. ಖೂಬಾ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಪುನಃ ಕಣಕ್ಕಿಳಿಸಿದರೆ ಅವರ ಗೆಲುವಿಗಾಗಿ ಶ್ರಮಿಸುವುದಿಲ್ಲ’ ಎಂದು ಔರಾದ್ ಶಾಸಕ ಪ್ರಭು ಚವಾಣ್ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಶರಣು ಸಲಗರ ಅವರ ಹೇಳಿಕೆ ಹೊರಬಿದ್ದಿರುವುದು ಮಹತ್ವ ಪಡೆದಿದೆ.