ಕೇಂದ್ರ ಸಚಿವರು ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.16:- ರಾಜ್ಯದಿಂದ ಆಯ್ಕೆಯಾಗಿರುವ ಐದು ಮಂದಿ ಕೇಂದ್ರ ಸಚಿವರು ಕಾವೇರಿ ವಿವಾದ ಇತ್ಯರ್ಥಕ್ಕೆ ಹಾಗೂ ಮೇಕೆದಾಟು ಯೋಜನೆ ಶೀಘ್ರ ಪ್ರಾರಂಭಿಸಬೇಕೆಂದು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್.ಜಯಪ್ರಕಾಶ್(ಜೆಪಿ) ಆಗ್ರಹಿಸಿದರು.
ಕಾವೇರಿ ಕ್ರಿಯಾ ಸಮಿತಿಯ ಆಶ್ರಯದಲ್ಲಿ ಮೈಸೂರಿನ ಕೋಟೆ ಆಂಜನೇಯ ದೇವಾಲಯದಿಂದ ಬೈಕ್ ರ್ಯಾಲಿ ನಡೆಸಿ ಮೇಕೆದಾಟಿನಲ್ಲಿ ಪ್ರತಿಭಟನಾ ಧರಣಿಯ ನೇತೃತ್ವವಹಿಸಿ ಮಾತನಾಡಿದರು. ನೂತನವಾಗಿ ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ರವರು ತಮ್ಮ ಸಚಿವ ಸ್ಥಾನದ ಅಧಿಕಾರದ ಜವಾಬ್ದಾರಿಯಿಂದ ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಮೇಕೆದಾಟು ಯೋಜನೆಯನ್ನು ಈ ಕೂಡಲೇ ಪ್ರಾರಂಭಿಸಿ ತಮ್ಮ ಅಧಿಕಾರದ ಸಾರ್ಥಕತೆಯನ್ನು ಧೈರ್ಯದಿಂದ ನಿಭಾಯಿಸಬೇಕೆಂದರು. ರಾಜ್ಯದ ಎಲ್ಲಾ ಪಕ್ಷದ ನಾಯಕರುಗಳು ರಾಜಕೀಯ ಇಚ್ಚಾಸಕ್ತಿಯನ್ನು ಪ್ರದರ್ಶಿಸಿ ರಾಜ್ಯದ ಜನತೆಗೆ ಮೇಕೆದಾಟು ಯೋಜನೆ, ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಬೇಕೆಂದರು. ಮೇಕೆದಾಟಿನಲ್ಲಿ ಅರಣ್ಯ ಪ್ರದೇಶದ ಟೋಲ್‍ಗೇಟ್ ಮುಂಭಾಗ ಪ್ರತಿಭಟನಾ ಧರಣಿಯನ್ನು ನಡೆಸಿದ ಕಾವೇರಿ ಕ್ರಿಯಾ ಸಮಿತಿಯು ನಮ್ಮ ಕಾವೇರಿ ನಮ್ಮ ಹಕ್ಕು ಕರ್ನಾಟಕದ ಹಕ್ಕು ಎಂದು ಪ್ರತಿಪಾದಿಸಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಗೆರೆ ಗೋಪಾಲ್, ಮೂಗೂರು ನಂಜುಡಸ್ವಾಮಿ, ರೈತ ಮುಖಂಡ ಸಂಪತ್‍ಕುಮಾರ್, ತೇಜಸ್ ಲೋಕೇಶ್‍ಗೌಡ, ದೇವರಾಜ್, ನಜೀಬುಲ್ಲಾ ಮುಂತಾದವರು ಮಾತನಾಡಿ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿದರು. ಕಾವೇರಿ ಕ್ರಿಯಾ ಸಮಿತಿಯ ಶ್ರೀನಿವಾಸ್‍ಗೌಡ, ಬೀರೇಶ್ ಸಂಜಯ್ ನೇಹ, ಆಟೋ ಮಹದೇವ್, ಒಬಿಸಿ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ದಿನೇಶ್, ರಾಮೇಗೌಡ್ರು ರಘು, ಮಹೇಶ್‍ಗೌಡ, ಹನುಮಂತೇಗೌಡ, ಮಹೇಶ್‍ತಲಕಾಡು, ಅಶೋಕ್, ಸೇರಿ ಮುಂತಾದವರಿದ್ದರು.