ಕೇಂದ್ರ ಸಚಿವರಿಂದ ಬಾಲಿಶ ಹೇಳಿಕೆ: ಈಶ್ವರ ಖಂಡ್ರೆ

ಬೀದರ್:ಜು.24: ಕೇಂದ್ರ ಸಚಿವರು (ಭಗವಂತ ಖೂಬಾ) ಬಾಲಿಶವಾದ ಹೇಳಿಕೆಗಳನ್ನು ಕೊಡುತ್ತಾರೆ. ಅವರ ಪ್ರತಿಯೊಂದು ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಬೆಳೆ ವಿಮೆಗೆ ಸಂಬಂಧಿಸಿದಂತೆ ಸಚಿವ ಈಶ್ವರ ಖಂಡ್ರೆ ಅವರು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ನೀಡಿರುವ ಹೇಳಿಕೆ ಕುರಿತು ಪತ್ರಕರ್ತರು ನಗರದಲ್ಲಿ ಭಾನುವಾರ ಪ್ರಶ್ನಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.

ಬೀದರ್ ಜಿಲ್ಲೆಯಲ್ಲಿ ಬೆಳೆ ವಿಮೆಗೆ ವೈಜ್ಞಾನಿಕವಾಗಿ ಪರಿಹಾರ ಕೊಟ್ಟಿಲ್ಲ. ಅದರಲ್ಲಿ ಮೋಸ ಆಗಿದೆ ಎಂದು ಹೇಳಿದ್ದೇನೆ. ಅದರ ಬಗ್ಗೆ ಪರಿಶೀಲನೆ ನಡೆಯಬೇಕಿದೆ. ಬೆಳೆ ವಿಮೆ ನೀತಿಗಳನ್ನು ಬದಲಿಸುವ ಅಗತ್ಯವಿದೆ. ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಬೆಳೆ ವಿಮೆ ಕಂಪನಿಗಳಿಗೆ ಪ್ರತಿ ವರ್ಷ ?200 ಕೋಟಿ ಹೋಗುತ್ತಿದೆ. ಏಳು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಕೋಟಿ ಹೋಗಿದೆ. ರೈತರಿಗೆ ?400 ಕೋಟಿ ಕೊಟ್ಟಿರಬಹುದು. ಎಲ್ಲವೂ ಗೌಪ್ಯವಾಗಿ ನಡೆದಿದೆ. ಯಾರಿಗೂ ಇದರ ಬಗ್ಗೆ ಮಾಹಿತಿ ಇಲ್ಲ. ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಯಾವುದೇ ಕ್ರಮ ಕೈಗೊಂಡಿಲ್ಲವೇಕೇ? ಎಂದು ಪ್ರಶ್ನಿಸಿದರು.

2 ಕೋಟಿ ಸಸಿ ಪೂರ್ಣ:

‘ರಾಜ್ಯದಾದ್ಯಂತ ಇದುವರಗೆ ಎರಡು ಕೋಟಿ ಸಸಿಗಳನ್ನು ನೆಡುವ ಕೆಲಸ ಪೂರ್ಣಗೊಂಡಿದೆ. ಪ್ರತಿ ವರ್ಷ ಐದು ಕೋಟಿ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಿಗದಿತ ಗುರಿ ಸಾಧಿಸಲಾಗುವುದು’ ಎಂದು ಖಂಡ್ರೆ ತಿಳಿಸಿದರು.