ಸಂಜೆವಾಣಿ ವಾರ್ತೆ
ಕೊಪ್ಪಳ, ಅ.11: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 10 ರಂದು ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಯೋಜನೆಗಳು ಮತ್ತು ಕಾಮಗಾರಿಗಳನ್ನು ನಡೆಸುವಲ್ಲಿ ತೊಡಕುಗಳು ಇದ್ದಲ್ಲಿ ಅದನ್ನು ಕೂಡಲೆ ಸರಿಪಡಿಸಿಕೊಂಡು ಕಾಲಮಿತಿಯೊಳಗೆ ಕಾರ್ಯನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಅಗಲೀಕರಣಕ್ಕೆ ಬೇಕಾಗುವ ಅನುಮತಿ, ಯೋಜನೆಗಳಿಗೆ ಅವಶ್ಯವಿರುವ ಜಮೀನು ಮಂಜೂರಾತಿ, ಇರುವ ಜಮೀನು, ನಿವೇಶನಗಳಲ್ಲಿ ಕಾಮಗಾರಿ ನಡೆಸಲು ಬೇಕಾಗಬಹುದಾದ ನಿರಪೇಕ್ಷಣ ಪತ್ರ, ರಸ್ತೆ ಮಾರ್ಗಗಳ ಬದಲಾವಣೆ, ಆರ್.ಟಿ.ಓ ಅವರಿಂದ ಅನುಮತಿ, ಗ್ರಾಪಂಗಳಿಂದ ಅನುಮತಿ ಅಥವಾ ಸಹಕಾರ ಪಡೆಯುವುದು, ಕಾನೂನು ಆದೇಶಗಳು ಸೇರಿದಂತೆ ಇಂತಹ ಯಾವುದೇ ವಿಷಯಗಳ ಬಗ್ಗೆ ಅಧಿಕಾರಿಗಳು ವಿಳಂಬ ಮಾಡದೇ ಚರ್ಚಿಸಿ ಕಾರ್ಯವನ್ನು ಸರಳೀಕರಣಗೊಳಿಸಿ ಕಾರ್ಯ ಯೋಜನೆಗಳ ಪ್ರಗತಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ನಿರ್ದೇಶನ ನೀಡಿದರು.
ರೈಲ್ವೆ ಇಲಾಖೆ, ಇಂಧನ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಏಜೆನ್ಸಿಯವರು, ಸಂಸ್ಥೆಗಳು ಯಾವುದೇ ಸಮಸ್ಯೆಗಳಿದ್ದಲ್ಲಿ ಸಭೆ ನಡೆಸುವ ಪೂರ್ವದಲ್ಲಿ ಕಾರ್ಯಸೂಚಿಯನ್ವಯ ಮಾಹಿತಿ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಹ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು,