ಕೇಂದ್ರ-ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ

ಕಲಬುರಗಿ,ಮಾ.2-ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಭಾರತೀಯ ರಾಷ್ಟ್ರೀಯ ಕಾರ್ಮಿಕರ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿರುವ ಹಾಗೂ ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿ ಜಾರಿಗೊಳಿಸಿ ಕಾನೂನು ತಿದ್ದುಪಡಿ ಮಾಡಿರುವುದನ್ನು, ಕಾರ್ಮಿಕರ ಸೌಲಭ್ಯಗಳನ್ನು ಮೊಟಕುಗೊಳಿಸಿರುವುದನ್ನು ಖಂಡಿಸಲಾಯಿತು.
ಕಾರ್ಮಿಕರಿಗೆ 8 ಗಂಟೆ ಕೆಲಸ ಮಾಡುವ ಕಾನೂನು ಪುನರ್ ಜಾರಿಗೊಳಿಸಬೇಕು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾನೂನು ವಾಪಸ್ ಪಡೆಯಬೇಕು ಎಂಬ ಬೇಡಿಕೆ ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಒಕ್ಕೂಟದ ಜಿಲ್ಲಾಧ್ಯಕ್ಷ ಅಶೋಕ ಘೂಳಿ, ಪ್ರಧಾನ ಕಾರ್ಯದರ್ಶಿ ಚಂದು ಜಾಧವ, ಕಾರ್ಯದರ್ಶಿ ಮಿರಾಜ್ ಕಲ್ಯಾಣ ವಾಲಾ, ನಾಗೇಂದ್ರಪ್ಪ ಹೆಡ್ಡಳ್ಳಿ, ಅನ್ನಪೂರ್ಣ, ಬಾಲಮ್ಮ, ಮಲ್ಲಿಕಾರ್ಜುನ ಮಾಳಗೆ, ವಿನೋದ ಚವ್ಹಾಣ, ಶಿವಲಿಂಗ ಸಾವಳಗಿ, ಪಾರ್ವತಿ ಕಾರಬಾರಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.