ಕೇಂದ್ರ, ರಾಜ್ಯ ಸರ್ಕಾರಗಳು ರೈತ ನೆರವಿಗೆ ಧಾವಿಸಲು ಆಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೫: ಜಿಲ್ಲೆಯಲ್ಲಿ ಮಳೆ ಕೊರತೆಯಾಗಿ ಬರ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿ ಸಮೀಕ್ಷೆ ಆಗಬೇಕು. ಬೆಳೆ ಹಾನಿ ಬಗ್ಗೆ ಗುರುತಿಸಿ, ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ನೀತಿ, ನಿಯಮದಲ್ಲಿ ಬದಲಾವಣೆ ತಂದು, ಸೂಕ್ತ ಪರಿಹಾರ ನೀಡಬೇಕು. ಬೆಳೆ ಹಾನಿಗೆ ತುತ್ತಾದ ರೈತರ ನೆರವಿಗೆ ಉಭಯ ಸರ್ಕಾರಗಳು ಧಾವಿಸಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಭಯ ಸರ್ಕಾರಗಳನ್ನು ಆಗ್ರಹಿಸಿದರು.ತಾಲೂಕಿನ ಆನಗೋಡು ಸಮೀಪ ಉಳುಪಿನಟ್ಟೆ ಕ್ರಾಸ್ ಬಳಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಹಮ್ಮಿಕಂಡಿದ್ದ ದಿವಂಗತ ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಾಚಾರ್‍ರ 31ನೇ ರೈತ ಹುತಾತ್ಮರ ದಿನಾಚರಣೆ, ಸ್ಮಾರಕ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಸಚಿವರನ್ನು ಭೇಟಿ ಮಾಡಿ, ದಾವಣಗೆರೆ ತಾಲೂಕನ್ನು ಬರ ಪೀಡಿತವೆಂದು ಘೋಷಿಸಲು ಒತ್ತಾಯಿಸಿದ್ದೇವೆ. ಈಗಾಗಲೇ ಬರದ ವಾಸ್ತವ ವರದಿಯನ್ನು ತಾಲೂಕು, ಜಿಲ್ಲಾಡಳಿತ ನೀಡಿವೆ ಎಂದು ಹೇಳಿದರು.ರೈತರಿಗೆ ಎಕರೆಗೆ ಕನಿಷ್ಟ 25-30 ಸಾವಿರ ಪರಿಹಾರ ನೀಡಬೇಕು. ಅತೀ ಹೆಚ್ಚು ಮೆಕ್ಕೆಜೋಳ ದಾವಣಗೆರೆ ಬೆಳೆಯುತ್ತದೆ. ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ರಾಗಿಯಂತೆ ಮೆಕ್ಕೆಜೋಳವನ್ನೂ ನೀಡಬೇಕು. ಮೆಕ್ಕೆಯನ್ನು ಪಡಿತರ ವ್ಯವಸ್ಥೆಯೊಳಗೆ ತರಬೇಕು ಎಂದರು.ತಹಶೀಲ್ದಾರ್ ಡಾ.ಅಶ್ವತ್ಥ ಮಾತನಾಡಿ, ದಾವಣಗೆರೆ ತಾಲೂಕಿನ 15ರಿಂದ 17 ಗ್ರಾಮಗಳ ಬೆಳೆ ಹಾನಿ ಸಮೀಕ್ಷೆ ಜವಾಬ್ಧಾರಿ ನೀಡಿದ್ದರು. ಗ್ರಾಮ ಸರ್ವೇ ವೇಳೆ ಶೇ.90 ಬೆಳೆ ಒಣಗಿದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಮೀಕ್ಷೆ ಮಾಡಿ, ವರದಿ ನೀಡಿದ್ದೇವೆ. ಸರ್ಕಾರದಿಂದ ಶೀಘ್ರವೇ ಬರ ಘೋಷಣೆ ಸಾಧ್ಯವಿದೆ. ಅಡಿಕೆಗೆ ಬೆಲೆ ಬಂದಿದೆಯೆಂದು ಎಲ್ಲಾ ರೈತರು ಅಡಿಕೆಯತ್ತ ಮುಖ ಮಾಡುತ್ತಿದ್ದಾರೆ. ನಮ್ಮ ಊರಿನಲ್ಲೇ ಶೇ.50-55 ರೈತರು ಅಡಿಕೆ ತೋಟ ಮಾಡುತ್ತಿದ್ದು, ಇದರಿಂದ ಇತರೆ ಬೆಳೆ ಬೆಳೆಯಲು ಅವಕಾಶ ಇಲ್ಲದಂತಾಗಿದೆ. ಅತೀ ಹೆಚ್ಚು ನೀರು ಅಡಿಕೆ ಬೆಳೆಗೆ ಬಳಸುತ್ತಿದ್ದು, ಭವಿಷ್ಯದಲ್ಲಿ ಇತರೆ ಬೆಳೆಗಳಿಗೂ ತೀವ್ರ ಸಂಕಷ್ಟ ಬರಲಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಾಬನೂರು ಎಚ್.ಆರ್.ಲಿಂಗರಾಜ, ಆನಗೋಡು ನಂಜುಂಡಪ್ಪ, ಆವರಗೆರೆ ರುದ್ರಮುನಿ, ಬೆಸ್ಕಾಂ ಅಧೀಕ್ಷಕ ಅಭಿಯಂತರ ಬಿ.ಎಸ್.ಜಗದೀಶ, ಹೊನ್ನೂರು ಮುನಿಯಪ್ಪ, ತುರ್ಚಘಟ್ಟ ಎಸ್.ಬಸವರಾಜಪ್ಪ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಹೆದ್ನೆ ಎಂ.ಬಿ.ಮುರಿಗೇಂದ್ರಪ್ಪ, ಹೊನ್ನನಾಯಕನಹಳ್ಳಿ ಮುರಿಗೇಂದ್ರಪ್ಪ, ದಿವಂಗತ ಕಲ್ಲಿಂಗಪ್ಪ, ನಾಗರಾಜಚಾರ್ ಕುಟುಂಬ ಸದಸ್ಯರು, ತಾಪಂ ಇಂಜಿನಿಯರ್ ಪುಟ್ಟಸ್ವಾಮಿ, ರಾಮಗೊಂಡನಹಳ್ಳಿ ರಾಜಶೇಖರ, ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರ, ಎಚ್.ಎನ್.ಶಿವಕುಮಾರ, ಆನಗೋಡು ನಾಡ ಕಚೇರಿ ತಹಸೀಲ್ದಾರ್ ರಾಮಸ್ವಾಮಿ, ಗುತ್ತಿಗೆದಾರ ರೇವಣ್ಣ ಇತರರು ಇದ್ದರು.