ಕೇಂದ್ರ- ರಾಜ್ಯ ಸರಕಾರದ ಕಾರ್ಮಿಕ, ಕೈಗಾರಿಕಾ ವಿರೋಧಿ ನೀತಿ: ಲಾರೆನ್ಸ್‌ 

ಮಂಗಳೂರು, ನ.1೧- ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ನ.12ರಂದು ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲಾಧ್ಯಕ್ಷ ಲಾರೆನ್ಸ್ ಡಿಸೋಜ ತಿಳಿಸಿದರು. 

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಅಪರಾಹ್ನ 3 ಗಂಟೆಗೆ ನಗರದ ಕೂಳೂರಿನ ಕೆಐಒಸಿಎಲ್ ಮುಂಭಾಗದಲ್ಲಿ ಈ ಜನಾಗ್ರಹ ಸಭೆ ನಡೆಯಲಿದೆ. ಘಟಕದ ರಾಜ್ಯಾಧ್ಯಕ್ಷ ಪುಟ್ಟೆಸ್ವಾಮಿ ಗೌಡ, ಕೆಪಿಸಿಸಿ ಉಪಾಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ, ಕೈಗಾರಿಕಾ ವಿರೋಧಿ ನೀತಿಯಿಂದಾಗಿ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಐಒಸಿಎಲ್‌ಗೆ ರ್ತುಗೆ ಶೇ.45 ಸುಂಕ ವಿಧಿಸಿರುವುದರ ಪರಿಣಾಮ ಕಳೆದ 5 ತಿಂಗಳುಗಳಿಂದ ಇಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದು, ಸುಮಾರು 1,600 ಉದ್ಯೋಗಿಗಳು, ಇದನ್ನು ಅವಲಂಬಿತ 2,600ಕ್ಕೂ ಅಧಿಕ ಕುಟುಂಬಗಳ ಭವಿಷ್ಯ ಅತಂಕದಲ್ಲಿದೆ. ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿರುವ ಘಟಕಗಳು ಗೋದಾಮುಗಳಾಗಿ ಪರಿವರ್ತಿತವಾಗಿವೆ. ಪ್ರಮುಖ ಉದ್ದಿಮೆಯಾಗಿರುವ ಜೆಬಿಎಫ್ 2018ರಲ್ಲಿ ಉತ್ಪಾದನೆ ಆರಂಭಿಸಬೇಕಿತ್ತು. ಆದರೆ ಇನ್ನೂ ಕಾರ್ಯಾರಂಭಮಾಡಿಲ್ಲ. ಎಂಆರ್‌ಪಿಎಲ್‌ನ 5 ನೇ ಹಂತದ ವಿಸ್ತರಣೆಯಲ್ಲಿ ಭೂಸ್ವಾಧೀನ ಪ್ಯಾಕೇಜ್‌ನಲ್ಲಿ ನಿರ್ವಸಿತರಿಗೆ ಉದ್ಯೋಗ ನೀಡುವ ಅಂಶವನ್ನು ಕೈಬಿಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಹೊಸದಾಗಿ ಹೂಡಿಕೆಗಳು ಹರಿದುಬರುತ್ತಿಲ್ಲ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಹೂಡಿಕೆದಾರರ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ .ಇಲ್ಲಿ ಉನ್ನತ ಶಿಕ್ಷಣ ಪಡೆದು ಹೊರಬರುತ್ತಿರುವ ಯುವಜನತೆ ಉದ್ಯೋಗ ಅರಸಿ ಹೊರ ರಾಜ್ಯಗಳತ್ತ ತೆರಳುತ್ತಿದ್ದಾರೆ. ಈ ಎಲ್ಲಾ ಅಂಶಗಳ ಬಗ್ಗೆ ಜನಾಗ್ರಹ ಸಭೆಯ ಮೂಲಕ ಸರಕಾರದ ಗಮನ ಸೆಳೆಯಲಾಗುವುದು ಎಂದವರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಹುಸಿಯಾಗಿದೆ. ಪ್ರಸಕ್ತ ಉದ್ಯೋಗ ಸೃಷ್ಟಿಯ ಬದಲು ಉದ್ಯೋಗ ನಷ್ಟವಾಗುತ್ತಿದೆ ಎಂದರು. ಕಾರ್ಮಿಕ ಕಲ್ಯಾಣ ನಿಧಿಯ ಪ್ರಯೋಜನ ಅಸಂಘಟಿತ ವಲಯದ ಕಾರ್ಮಿಕರಿಗೂ ಲಭಿಸುವಂತೆ ಇದಕ್ಕೆ ತಿದ್ದುಪಡಿ ತರಬೇಕು ಎಂದವರು ಆಗ್ರಹಿಸಿದರು. ಮುಖಂಡರಾದ ಸಲೀಂ,ವಿಶ್ವಾಸ್‌ದಾಸ್ ಕುಮಾರ್, ಸುರೇಂದ್ರ ಕಂಬಳಿ, ನೀರಜ್ ಪಾಲ್,ಉಮೇಶ್ ದಂಡಕೇರಿ, ಕಾರ್ಪೋರೇಟರ್ ಅನಿಲ್ ಅನಿಲ್ ಕುಮಾರ್,ವಹಾಬ್ ಕುದ್ರೋಳಿ, ಜಯರಾಜ ಕೋಟ್ಯಾನ್, ಸುನೀಲ್, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.