ಕೇಂದ್ರ, ರಾಜ್ಯ ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ


ಬಳಾರಿ,ಏ.6: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಅಂಗವಾಗಿ ವಿವಿಧ ಚುನಾವಣಾ ಕಾರ್ಯಗಳಿಗೆ ನಿಯೋಜಿಸಿದ ಅಧಿಕಾರಿಗಳು ಮತ್ತು ಖಾಸಗಿ ವಲಯಗಳ ಅಧಿಕಾರಿಗಳು ಹಾಗೂ ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರು ಮತದಾನದಿಂದ ಹೊರಗುಳಿಯಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಅಂಚೆ ಮತಪತ್ರ ವಿತರಣೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯವರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಅಗತ್ಯ ಸೇವೆಗಳ ಇಲಾಖೆಗಳಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಲಾಖೆ ಮತ್ತು ಆಕಾಶವಾಣಿ, ಬಿ.ಎಸ್.ಎನ್.ಎಲ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಅಂಚೆ ಮತಚೀಟಿ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.
ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಫಾರಂ-12 ಅರ್ಜಿ ನೀಡಲಾಗುತ್ತದೆ. ಅದರಲ್ಲಿ ತಮ್ಮ ಹೆಸರು, EPIC Card ಸಂಖ್ಯೆ, ಆಯಾ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರ ಹೆಸರು, ಮತ ಚಲಾಯಿಸುವ ಮತಗಟ್ಟೆ ಸಂಖ್ಯೆ ಹಾಗೂ ಇತರೆ ಮಾಹಿತಿ ಭರ್ತಿ ಮಾಡಿ ನೀಡಬೇಕು.     
ನಮೂನೆ-12 ಭರ್ತಿ ಮಾಡಿ ನೀಡುವವರಿಗೆ ನಮೂನೆ-13ಎ ರಡಿ ಡಿಕ್ಲರೇಷನ್ ಪಡೆಯಲಾಗುತ್ತದೆ. ನಂತರ ಅಂಚೆ ಮತಚೀಟಿಯನ್ನು ವಿತರಣೆ ಮಾಡಿ ಮತದಾನಕ್ಕೆ ಆಯಾ ತಾಲ್ಲೂಕು ಕಚೇರಿಯಲ್ಲಿ ಅಂಚೆ ಮತದಾನ ಸೇವಾ ಕೇಂದ್ರವನ್ನು ಸ್ಥಾಪನೆ ಮಾಡುವ ಮೂಲಕ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಮತಚೀಟಿಯನ್ನು ನಮೂನೆ-13ಬಿ ರಡಿ ಚಿಕ್ಕ ಕವರ್‍ನಲ್ಲಿ ಹಾಕಬೇಕು, ನಂತರ 13-ಸಿ ರಡಿ ದೊಡ್ಡ ಕವರ್‍ನಲ್ಲಿ ಹಾಕಿ ಸೀಲ್ ಮಾಡಿ ಮತಪಟ್ಟಿಗೆಗೆ ಹಾಕಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ. 
ಇತರೆ ಜಿಲ್ಲೆಯ ಮತದಾರರಾಗಿದ್ದಲ್ಲಿ ನಮೂನೆ-12 ಭರ್ತಿ ಮಾಡಿ ಆಯಾ ಜಿಲ್ಲೆಯ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅವರು ನೀಡಿದ ವಿಳಾಸಕ್ಕೆ ಅಂಚೆ ಮೂಲಕ ಮತಪತ್ರವನ್ನು ಕಳುಹಿಸಲಿದ್ದು ಮತದಾನ ಮಾಡಿ ಅಂಚೆ ಮೂಲಕ ಮತ್ತೆ ಕಳುಹಿಸಿಕೊಡಬೇಕಾಗುತ್ತದೆ ಎಂದರು.
ಇಲಾಖಾವಾರು ಅಂಚೆ ಮತದಾನಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಈ ಪಟ್ಟಿಯನ್ನು ಏ.8 ರೊಳಗಾಗಿ ನೀಡಬೇಕು. ಏ.9 ಕ್ಕೆ ಫಾರಂ-12 ನೀಡಲಾಗುವುದು. ಯಾವುದೇ ಕಾರಣಕ್ಕೂ ಮತದಾನದಿಂದ ಹೊರಗುಳಿಯಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ನಟರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

One attachment • Scanned by Gmail