ಕೇಂದ್ರ ಯೋಜನೆಗಳ ಮಾಹಿತಿ ಪುಸ್ತಕ ಸೂರ್ಯಕಾಂತ್ ಕಾರ್ಯಕ್ಕೆ ರಾಜನಾಥ್‍ಸಿಂಗ್ ಮೆಚ್ಚುಗೆ

ಬೀದರ್:ಸೆ.12:ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಮಾರ್ಗದರ್ಶನದಲ್ಲಿ ಪ್ರಕಟಿಸಲಾಗಿರುವ ಕೇಂದ್ರ ಸರಕಾರದ ಜನಪರ, ಕಲ್ಯಾಣ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇರುವ `ನವ ಭಾರತಕ್ಕೆ ನವ ಯೋಜನೆಗಳು’ ಪುಸ್ತಕ ಕುರಿತು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೂರ್ಯಕಾಂತ್ ನಾಗಮಾರಪಳ್ಳಿ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ, ತಾವು ಪ್ರಕಟಿಸಿದ ಪುಸ್ತಕ ಕುರಿತು ಮಾಹಿತಿ ನೀಡಿದರು. ಜೊತೆಗೆ ಬೀದರ್ ಉತ್ತರ ಕ್ಷೇತ್ರದಲ್ಲಿನ ಅಭಿವೃದ್ದಿಪರ, ಜನಪರ ಕೆಲಸ ಕಾರ್ಯಗಳ ಬಗ್ಗೆ, ಡಿಸಿಸಿ ಬ್ಯಾಂಕು ಮೂಲಕ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ಬಗ್ಗೆ, ನಿರುದ್ಯೋಗಿಗಳಿಗೆ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುವ ಶಾರದಾ ಆರ್‍ಸೆಟಿ ಸಂಸ್ಥೆಯ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆ, ಬೀದರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಪ್ರಗತಿಗಾಗಿ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆಯೂ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಮಾರ್ಗದರ್ಶನ ಪಡೆದುಕೊಳ್ಳಲಾಗಿದೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಕೈಗೊಳ್ಳಲಾಗಿರುವ ಪರಿಹಾರ ಕಾರ್ಯ, ರೂ.1 ರಲ್ಲ್ಲಿ ಚಿಕಿತ್ಸೆ, ಬಡವರು ಮತ್ತು ನಿರ್ಗತಿಕರಿಗೆ ದಿನಸಿ ಕಿಟ್‍ಗಳ ವಿತರಣೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಕುರಿತು ಕೇಂದ್ರ ಗೃಹ ಸಚಿವರಿಗೆ ತಿಳಿಸಲಾಯಿತು.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 2,00,000 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿರುವುದನ್ನು, ಕೋವಿಡ್ ಸೋಂಕಿತರ ಗೌರವಪೂರ್ಣ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದನ್ನು ಸಚಿವರಿಗೆ ತಿಳಿಸಲಾಯಿತು.

ಶಾರದಾ ಆರ್‍ಸೆಟಿ ಸಂಸ್ಥೆಯಿಂದ ಇಲ್ಲಿಯವರೆಗೆ ಗ್ರಾಮೀಣ ಭಾಗದ 18,300 ಯುವಕರಿಗೆ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗಿದ್ದ ಸಂಗತಿ ತಿಳಿದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಹಾಗೂ ಪಿಕೆಪಿಎಸ್ ಬೆಂಬಲದೊಂದಿಗೆ ಸತತ 6 ನೇ ವರ್ಷ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಅಗ್ರಸ್ಥಾನ ಪಡೆದಿರುವ ವಿಷಯವನ್ನು ಸಚಿವರ ಗಮನಕ್ಕೆ ತರಲಾಯಿತು. ಫಸಲ್ ಬಿಮಾ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ರೂ. 376 ಕೋಟಿ ಜಮೆಯಾಗಿರುವ ಬಗ್ಗೆ ಮತ್ತು ಈ ವರ್ಷ 1.35 ಲಕ್ಷಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿರುವುದು ಮಾದರಿಯಾಗಿದ್ದು, ಇತರ ಜಿಲ್ಲೆಗಳಿಗೆ ಪ್ರೇರಣೆ ನೀಡುವಂತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಅನ್ನು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಯುವಂತೆ ಮುನ್ನಡೆಸಿದ ಬ್ಯಾಂಕ್ ಅಧ್ಯಕ್ಷರಾಗಿದ್ದ ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಮೊದಲ ಬಾರಿ ಆರಂಭಿಸಿದ್ದ ಸ್ವಸಹಾಯ ಸಂಘಗಳು ಮತ್ತು ಈ ಸಂಘಗಳಿಂದ ಆಗಿರುವ ಮಹತ್ತರ ಬದಲಾವಣೆ ಬಗ್ಗೆ ಕೇಂದ್ರ ಸಚಿವರು ಮಾಹಿತಿ ಪಡೆದುಕೊಂಡರು. ಸಂಘಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿವರ್ತನೆ ತರುವ ರೀತಿಯಲ್ಲಿ ಬೆಳೆದಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.

86 ದೇವಾಲಯಗಳು, 18 ಮಸೀದಿಗಳು ಮತ್ತು 12 ಚಚ್ರ್ಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ಮಂಜೂರು ಮಾಡಿಸಲಾಗಿದೆ. ಬೀದರ್‍ನ ಹಳೆಯ ಆಸ್ಪತ್ರೆಯನ್ನು 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಉನ್ನತೀಕರಿಸಲಾಗಿದೆ. ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಅನುಷ್ಠಾನ ಮುಂತಾದವುಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಕೃತಿಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಅವರು ಬಿಡುಗಡೆ ಮಾಡಿರುವ ವಿಷಯವನ್ನೂ ರಾಜನಾಥ್‍ಸಿಂಗ್ ಅವರ ಗಮನಕ್ಕೆ ತರಲಾಯಿತು. ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.