ಕೇಂದ್ರ ಮಾಜಿ ಸಚಿವ ಬಾಬುಗೌಡ ಪಾಟೀಲ್ ನಿಧನ

ಬೆಂಗಳೂರು,ಮೇ ೨೧-ಕೇಂದ್ರದ ಮಾಜಿ ಸಚಿವ, ಅಖಂಡ ರೈತ ಸಂಘದ ಅಧ್ಯಕ್ಷ ಬಾಬುಗೌಡ ಪಾಟೀಲ್ (೮೮) ಇಂದು ನಿಧರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೇಬಾಗೇವಾಡಿಯಲ್ಲಿ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ. ಬಾಬುಗೌಡ ಪಾಟೀಲ್ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಾಡಿನ ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಅವರು ಪ್ರಬಲ ರೈತ ಪರ ನಾಯಕರಾಗಿ ಗುರುತಿಸಿಕೊಂಡಿದ್ದರು. ರೈತ ಸಂಘದಿಂದ ರಾಜಕೀಯ ಜೀವನ ಆರಂಭಿಸಿದ್ದ ಬಾಬುಗೌಡ ಪಾಟೀಲ್ ಅವರು ೧೯೮೯ರ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದಿಂದ ಕಿತ್ತೂರು ಮತ್ತು ಧಾರವಾಡ ಮತ ಕ್ಷೇತ್ರದಿಂದ ಕಣಕ್ಕಿಳಿದು ಎರಡೂ ಕ್ಷೇತ್ರದಲ್ಲಿ ಜಯಗಳಿಸಿದ್ದರು.
ನಂತರ ಅವರು ರೈತ ಸಂಘ ತೊರೆದು ಜಾತ್ಯಾತೀತ ಜನತಾದಳ, ಸಮಾಜವಾದಿ ಪಕ್ಷ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಗೆ ಸೇರ್ಪಡೆಯಾಗಿ ಪಕ್ಷಗಳನ್ನು ಬದಲಾಯಿಸಿದ್ದರು.
೧೯೯೮ರ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು, ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಂತಾಪ
ರೈತ ನಾಯಕ, ಬಾಬುಗೌಡ ಪಾಟೀಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಸಚಿವರು, ಗಣ್ಯರು ಸಂತಾಪ ವ್ಯಕ್ತಪಡಿಸಿ, ನಾಡು ಒಬ್ಬ ಜನಪ್ರಿಯ ರೈತ ನಾಯಕನನ್ನು ಕಳೆದುಕೊಂಡಿದೆ. ಇವರ ನಿಧನ ತುಂಬಲಾರದ ನಷ್ಟ ಎಂದು ಶೋಕಿಸಿದ್ದಾರೆ.