ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ವಿರುದ್ಧ ಜಿಲ್ಲಾ ಕಾಂಗ್ರೆಸ್ ರಸ್ತೆತಡೆ – ಪ್ರತಿಭಟನೆ

ರಾಯಚೂರು.ಜು.೨೨- ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಮತ್ತು ಸಂವಿಧಾನದತ್ತ ಸಂಸ್ಥೆಗಳಾದ ಇಡಿ ದುರ್ಬಳಕೆ ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಧರಣಿ ಮತ್ತು ರಸ್ತೆತಡೆ ಚಳುವಳಿ ನಡೆಸಲಾಯಿತು. ರಸ್ತೆತಡೆಯಿಂದ ಅಂಬೇಡ್ಕರ್ ವೃತ್ತ ಕೆಲ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯಾಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿ, ಕಿರುಕುಳ ನೀಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ. ಸಂವಿಧಾನ ವಿರೋಧಿ ಬಾಹೀರ ಚಟುವಟಿಕೆಗಳ ಮೂಲಕ ಬಿಜೆಪಿ ವಿರೋಧ ಪಕ್ಷಗಳ ದಮನಕ್ಕೆ ಮುಂದಾಗಿದೆ. ಸರ್ವಾಧಿಕಾರಿ ಧೋರಣೆ ಮೂಲಕ ದೇಶದಲ್ಲಿ ವಿನಾಶದ ಹಂಚಿಗೆ ತಳ್ಳುತ್ತಿದ್ದಾರೆಂದು ಆರೋಪಿಸಲಾಯಿತು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬೋಸರಾಜು ಅವರು ಮಾತನಾಡುತ್ತಾ, ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಸುಧೀರ್ಘ ಹೋರಾಟ ಮಾಡಿದ ಇತಿಹಾಸವಿದೆ. ಅಂದು ಮಾಧ್ಯಮಗಳು ದೇಶದ ಪರ ಜಾಗೃತಿ ಮೂಡಿಸಲು ಕಾರ್ಯ ನಿರ್ವಹಿಸಿವೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಷ್ಟದಲ್ಲಿತ್ತು. ಇದಕ್ಕೆ ಶೇರು ನೀಡುವ ಮೂಲಕ ಒಂದು ಮಾಧ್ಯಮವನ್ನು ಗಟ್ಟಿಗೊಳಿಸಲಾಗಿತ್ತು. ಈ ಪ್ರಕರಣವನ್ನು ರಾಜಕೀಯ ದ್ವೇಷಕ್ಕಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ.
ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಕಛೇರಿಗೆ ಕರೆದು, ಯಾವುದೇ ಪ್ರಶ್ನೆ ಕೇಳದೆ ಕೂಡಿಸಲಾಗುತ್ತಿದೆ. ಜಾರಿ ನಿರ್ದೇಶನಾಲಯ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರ ಮೇಲೆ ಜಿಎಸ್ಟಿ ಹೇರುವ ಮೂಲಕ ಜನರ ಬದುಕು ದುಬಾರಿಗೊಳಿಸಲಾಗಿದೆ. ಈ ಎಲ್ಲಾ ಅಂಶಗಳಿಂದ ಜನರ ಗಮನ ಬೇರೆಡೆ ತಿರುಗಿಸಿ, ಈ ರೀತಿಯ ಕೃತ್ಯಗಳನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆಂದರು.
ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಅವರು ಮಾತನಾಡುತ್ತಾ, ಕೇಂದ್ರ ಸರ್ಕಾರ ಸರ್ವಾಧಿಕಾರಿ ನೀತಿ ಅನುಸರಿಸುತ್ತಿದೆ. ದೇಶದಲ್ಲಿ ೭೦ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಏನೆಲ್ಲ ಅಭಿವೃದ್ಧಿ ಮಾಡಿರುವುದನ್ನು ಬಿಜೆಪಿ ಪ್ರಶ್ನಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಇಂದು ದೇಶದಲ್ಲಿರುವ ಮೂಲಭೂತ ಸೌಕರ್ಯಗಳು ಯಾರ ಅವಧಿಯಲ್ಲಿ ಮಾಡಲಾಗಿತ್ತು ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು. ಈ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾಲು ಪ್ರಮುಖವಾಗಿದೆಂದರು.
ಮಹ್ಮದ್ ಶಾಲಂ ಮತ್ತು ಶ್ರೀನಿವಾಸ ರೆಡ್ಡಿ ಅವರು ನಗರದಲ್ಲಿ ಬೃಹತ್ ಬೈಕ್ ಱ್ಯಾಲಿ ನಡೆಸಿ, ಅಂಬೇಡ್ಕರ್ ವೃತ್ತದ ಧರಣಿ ಸ್ಥಳಕ್ಕೆ ಆಗಮಿಸಿದರು.
ಈ ಪ್ರತಿಭಟನೆಯಲ್ಲಿ ಶಾಸಕರಾದ ದದ್ದಲ್ ಬಸವನಗೌಡ, ಬಸವನಗೌಡ ತುರ್ವಿಹಾಳ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ಸಾಹುಕಾರ, ಜಿ.ಬಸವರಾಜ ರೆಡ್ಡಿ, ಕೆ.ಶಾಂತಪ್ಪ, ಜಯಣ್ಣ, ಜಿ.ಶಿವಮೂರ್ತಿ, ಅಬ್ದುಲ್ ಕರೀಂ, ಮಾಡಗಿರಿ ನರಸಿಂಹಲು, ಅಮರೇಗೌಡ ಹಂಚಿನಾಳ, ಮಲ್ಲೇಶ ಕೊಲಮಿ, ತಿಮ್ಮಪ್ಪ, ಸುಧಾಮ, ಅರುಣ್ ದೋತರಬಂಡಿ, ನಾಗೇಂದ್ರಪ್ಪ, ಜಿಂದಪ್ಪ, ಸುಧೀಂದ್ರ ಜಾಗೀರದಾರ್, ಈರಣ್ಣ, ಮಂಜುಳಾ, ನಿರ್ಮಲಾ ಬೆಣ್ಣೆ, ವಂದನಾ, ಶಶಿಕಲಾ ಭೀಮರಾಯ, ರಾಣಿ ರಿಚರ್ಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.