ಕೇಂದ್ರ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಾರಿಗೆ ಬಸ್

ಅಫಜಲಪುರ:ಆ.11: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ತಾಲೂಕಿನ ಬಟಗೇರಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ವಾಗ್ವಾದ ಏರ್ಪಟ್ಟ ಹಿನ್ನೆಲೆ ಬಸ್ಸನ್ನೇ ಪೊಲೀಸ್ ಠಾಣೆಗೆ ತೆಗೆದುಕೊಂಡ ಹೋದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಬಸ್ಸಿನ ಒಳಗಡೆ ಸಾಕಷ್ಟು ಸ್ಥಳಾವಕಾಶ ಇದ್ದರೂ ಕೂಡ ಬಾಗಿಲ ಬಳಿ ಜೋತು ಬಿದ್ದಿದ್ದ ವಿದ್ಯಾರ್ಥಿಗಳು ಅಪಾಯದ ಮಟ್ಟಿ ಮೀರಿ ನಿಂತಿದ್ದರು. ಇದರಿಂದ ಕುಪಿತಗೊಂಡ ನಿರ್ವಾಹಕರು ಎಷ್ಟೇ ಬುದ್ಧಿವಾದ ಹೇಳಿದರೂ ಕೂಡ ವಿದ್ಯಾರ್ಥಿಗಳು ತಮ್ಮ ವರ್ತನೆಯನ್ನೇ ಮುಂದುವರಿಸಿದ್ದರು. ಹೀಗಾಗಿ ನಿರ್ವಾಹಕರು ಬಸ್ಸನ್ನು ನೇರವಾಗಿ ಅಫಜಲಪುರ ಪಟ್ಟಣದ ಪೊಲೀಸ್ ಠಾಣೆಗೆ ತಂದು ನಿಲ್ಲಿಸಬೇಕಾಯಿತು.

ನಂತರ ವಿದ್ಯಾರ್ಥಿಗಳನ್ನು ಕೆಳಗಿಳಿಸಿದ ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ ಮಾತನಾಡುತ್ತಾ, ಕಾಲೇಜಿಗೆ ವಿದ್ಯಾರ್ಥಿಗಳು ಓದಲು ಬರೆಯಲು ಹೋಗಬೇಕೆ ವಿನಹ ಇಂತಹ ಪುಂಡಾಟಗಳನ್ನು ಮಾಡಿ ಭವಿಷ್ಯ ಹಾಳು ಮಾಡಿಕೊಳ್ಳುವುದಕ್ಕಲ್ಲ. ಕೂಲಿ ನಾಲಿ ಮಾಡಿ ನಿಮ್ಮ ಪೋಷಕರು ಕಷ್ಟಪಟ್ಟು ಕಾಲೇಜಿಗೆ ಕಳಿಸಿದರೆ ನೀವು ಬೇಜವಾಬ್ದಾರಿತನದಿಂದ ವರ್ತಿಸುವುದು ಸರಿಯಲ್ಲ. ಒಂದು ವೇಳೆ ನಿಮ್ಮ ಜೀವಕ್ಕೆ ಏನಾದರು ಹಾನಿಯಾದರೆ ನಿಮ್ಮ ಕುಟುಂಬದ ಪರಿಸ್ಥಿತಿ ಏನಾಗಲಿದೆ ಎಂದು ಒಮ್ಮೆ ಯೋಚಿಸಿ ನೋಡಿ. ಬಸ್ಸುಗಳು ಸರ್ಕಾರಿ ಆಸ್ತಿ. ಅವುಗಳನ್ನು ಸರಿಯಾಗಿ ಕಾಪಾಡಿಕೊಂಡು ಹೋಗುವುದು ಎಲ್ಲರ ಆದ್ಯ ಕರ್ತವ್ಯ. ಚಾಲಕ ಮತ್ತು ನಿರ್ವಾಹಕರು ನಮಗಾಗಿ ದುಡಿಯುತ್ತಾರೆ. ಅವರ ಮಾತನ್ನು ಕೇಳಿ ಗೌರವಿಸಬೇಕು. ಇನ್ನು ಮುಂದೆ ಈ ರೀತಿ ನಡೆಯದಂತೆ ಶಿಸ್ತು ಪಾಲಿಸಬೇಕು ಇಲ್ಲವಾದರೆ ಅನಿವಾರ್ಯವಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ನಂತರ ರಸ್ತೆ ಸುರಕ್ಷತಾ ಅಭಿಯಾನದ ಕುರಿತು ವಿವಿಧ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಲಾಯಿತು.