ಕೇಂದ್ರ ಪುರಸ್ಕøತ ಯೋಜನೆಗಳ ಅನುಷ್ಠಾನದ ಪ್ರಗತಿಗೆ ಗಮನ ಹರಿಸಿ ಖೂಬಾ ಸೂಚನೆ

ಬೀದರ, ಜ 02:ಸರ್ವ ಶಿಕ್ಷಣ ಅಭಿಯಾನ, ಸ್ವಚ್ಛ ಭಾರತ ಮಿಶನ್, ನರೇಗಾ, ಪ್ರಧಾನಮಂತ್ರಿ ಪಸಲ್ ಭಿಮಾ ಯೋಜನಾ, ಮಿಡ್ ಡೇ ಮೀಲ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ ಕೇಂದ್ರ ಪುರಷ್ಕøತ ಹಲವಾರು ಯೋಜನೆಗಳ ಲಾಭವು ಸಾರ್ವಜನಿಕರಿಗೆ ತಲುಪುವಂತಾಗಲು ಆಯಾ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಯೋಜನೆಗಳ ಅನುಷ್ಠಾನದ ಪ್ರಗತಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಂಸದರಾದ ಭಗವಂತ ಖೂಬಾ ಅವರು ತಿಳಿಸಿದರು.
ಜನವರಿ 01 ರಂದು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಷ್ಕøತ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಕುರಿತ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಒಟ್ಟು 18 ಲಕ್ಷ ಜನರ ಪೈಕಿ ಅರ್ಹ ಎಲ್ಲರಿಗೂ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಸಿಗುವಂತಾಗಬೇಕು. ಈ ವಿಷಯದಲ್ಲಿ ವಿಳಂಬ ಮಾಡಬಾರದು ಎಂದು ತಿಳಿಸಿದರು. ಇದುವರೆಗೆ 4,17,000 ಕಾರ್ಡಗಳನ್ನು ನೀಡಲಾಗಿದ್ದು, ಬಾಕಿ ಉಳಿದ ಅರ್ಹರಾದ ಎಲ್ಲರಿಗೂ ಕೂಡಲೇ ಆಯುಷ್ಮಾನ್ ಭಾರತ ಕಾರ್ಡ ವಿತರಣೆಗೆ ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ 185 ಗ್ರಾಮ ಪಂಚಾಯತಗಳಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸಿ ಅಂಗನವಾಡಿ ಆಶಾಕಾರ್ಯಕರ್ತೆಯರೊಂದಿಗೆ ಮನೆಮನೆಗೆ ತೆರಳಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಣೆಯ ನಿಗದಿಪಡಿಸಿದ ಗುರಿ ಸಾಧಿಸಬೇಕು ಎಂದು ತಿಳಿಸಿದರು.
15 ದಿನಗಳ ಗಡುವು: ಜಿಲ್ಲೆಯಲ್ಲಿ ಲಿಂಗಾನುಪಾತದ ಬಗ್ಗೆ ಗಮನ ಹರಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ ವಹಿಸಬೇಕು. ಕಾನೂನುಬಾಹೀರ ಚಟುವಟಿಕೆಗಳನ್ನು ನಡೆಸುವ ಸ್ಕ್ಯಾನಿಂಗ್ ಸೆಂಟರಗಳ ಮೇಲೆ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಬೇಕು. ಕೈಗೊಂಡ ಕ್ರಮದ ಬಗ್ಗೆ 15 ದಿನದೊಳಗೆ ವರದಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಅತಿವೃಷ್ಠಿಯಿಂದಾದ ಬೆಳೆಹಾನಿಗೆ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ರೈತರಿಗೆ ಸಮರ್ಪಕ ಪರಿಹಾರ ಧನ ತಲುಪುವಂತಾಗಬೇಕು. ತೊಗರಿ, ಕಡಲೆ, ಜೋಳದ ಫಸಲಿನ ರೋಗದ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಸಂಸದರು ಇದೆ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
6 ರಿಂದ 10ನೇ ತರಗತಿಯವರೆಗೆ ವಿದ್ಯಾಗಮ ಯೋಜನೆಯು ಪುನಾರಂಭವಾಗಿದೆ. ಮಾಸ್ಕ ಧರಿಸುವುದು, ಆರೋಗ್ಯ ತಪಾಸಣೆ ಸೇರಿದಂತೆ ಕೋವಿಡ್-19ರ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ವಿದ್ಯಾವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲು ಬಟ್ಟೆ ಬಂದಿದ್ದು, ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ನಿಂತು ಹೋಗಿದ್ದ ಕೆಲವು ಚಟುವಟಿಕೆಗಳನ್ನು ಪನಾರಂಭಿಸಬೇಕು. ಪೋಷಣಾ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಸಂಸದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಅಧಿಕಾರಿಗಳು ಕಾಲಮಿತಿಯೊಳಗಡೆ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳಿಗೆ ವೈಫೈ ಸಂಪರ್ಕ ವದಗಿಸುವ ಪ್ರಕ್ರಿಯೆಯು ತೀವ್ರವಾಗಿ ನಡೆಯಬೇಕು ಎಂದು ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಸಂಸದರು ಸಭೆಯಲ್ಲಿ ಚಿಂಚೋಳಿ ಹಾಗೂ ಆಳಂದ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಕೂಡ ನಡೆಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಿರ್ಮಲಾ ವೈಜಿನಾಥ ಮಾನೆಗೋಪಾಳೆ, ಉಪಾಧ್ಯಕ್ಷರಾದ ವಿಜಯಕುಮಾರ ಅಣೆಪ್ಪ ಪಟೇಲ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗ್ವಾರ್, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬಸವಕಲ್ಯಾಣ, ಬೀದರ ಸಹಾಯಕ ಆಯುಕ್ತರುಗಳಾದ ಭುವನೇಶ ಪಟೇಲ್, ಗರಿಮಾ ಪನ್ವಾರ್, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.