ಕೇಂದ್ರ ನೀತಿ, ಸಿದ್ದು ಟೀಕೆ

ಬೆಂಗಳೂರು, ಫೆ. ೧೬- ಕೇಂದ್ರ ಸರ್ಕಾರದ ಅನುದಾನ ತಾರತಮ್ಯ, ತೆರಿಗೆ ಪಾಲಿನ ಕಡಿತದ ವಿರುದ್ಧ ದ್ವನಿ ಎತ್ತಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಆರಂಭಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಬಜೆಟ್‌ನಲ್ಲೂ ಕೇಂದ್ರದ ನೀತಿ ನಿಲುವುಗಳನ್ನು ಟೀಕಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿನ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳಿಂದಾಗಿ ಅಸಮಾನತೆ ಹೆಚ್ಚಳ, ಕೆಲವೇ ಜನರಲ್ಲಿ ಸಂಪತ್ತಿನ ಶೇಖರಣೆ ಹಾಗೂ ಪಟಬದ್ರ ಹಿತಾಸಕ್ತಿಗಳ ಹೆಚ್ಚುತ್ತಿರುವ ಪ್ರಭಾವ ಮುಂತಾದ ಅನಪೇಕ್ಷಿತ ಬೆಳವಣಿಗೆಗೆ ಎಡೆ ಮಾಡಿದೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳಿಂದಾಗಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದು, ಕೇಂದ್ರ ಮಾಡದ ಕೆಲಸವನ್ನು ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಮಾಡಿದೆ. ಈ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ, ಉದ್ಯೋಗ ಸೃಜಿಸಿ ಜನರ ಕೊಲ್ಳುವ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನವಾಗಿದೆ. ನಿಸ್ಪಕ್ಷಪಾತ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಸಂಪತ್ತಿನ ಮರು ಹಂಚಿಕೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ವಿರೋಧಿಗಳು ಬಿಟ್ಟಿ ಭಾಗ್ಯಗಳೆಂದು ಬಣ್ಣಿಸಿ ರಾಜ್ಯ ದಿವಾಳಿಯಾಗಿದೆ. ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಸುಳ್ಳು ಸುದ್ದಿ ಹರಡಿ ತಮ್ಮ ಸ್ಥೈರ್ಯ ಕುಗ್ಗಿಸಲುವ ಕೆಲಸ ಮಾಡಿದ್ದಾರೆ ಎಂದು ನೇರವಾಗಿ ವಿಪಕ್ಷ ನಾಯಕರುಗಳ ವಿರುದ್ಧ ಬಜೆಟ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದವರು ತಮ್ಮ ಹುಳುಕನ್ನು ಮುಚ್ಚಿ ಹಾಕಲು ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳು ಎಂದು ನಂಬಿಸಲು ಎಣಗಾಡುತ್ತಿರುವುದು ವಿಪರ್ಯಾಸ ಎಂದು ಕೇಂದ್ರದ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿಗಳು, ಇಂತಹ ಟೀಕೆಗಳಿಗೆ ನಾನಲ್ಲ ಶರಣರೇ ಉತ್ತರ ನೀಡಿದ್ದಾರೆ ಎಂದು ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸುದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ
ಎಂಬ ವಚನದ ಮೂಲಕ ಗ್ಯಾರಂಟಿ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ತೆರಿಗೆ ಹಂಚಿಕೆಯ ಅನ್ಯಾಯ-ಪ್ರಸ್ತಾಪ
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ತೆರಿಗೆ ಹಂಚಿಕೆ ಅನ್ಯಾಯವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು, ಜಿಎಸ್‌ಟಿ ಅತಿ ಹೆಚ್ಚು ತೆರಿಗೆ ಸಂಗ್ರಹಣೆಯಲ್ಲಿ ದೇಶದಲ್ಲೇ ರಾಜ್ಯ ಎರಡನೆಯದ್ದಾಗಿದ್ದರೂ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ೬೨೦೯೮ ಕೋಟಿ ರೂ.ಗಳಷ್ಟು ನಷ್ಠವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ನೌಕರ ಹಾಗೂ ಯಜಮಾನನ ಸಂಬಂಧವಾಗದೆ ಸಂವಿಧಾನದತ್ತ ಅಧಿಕಾರ ವ್ಯಾಪ್ತಿಯೊಳಗೆ ಸ್ವಾಯತತ್ತ ಘಟಕಗಳಾಗಿರಬೇಕು. ರಾಜ್ಯಗಳ ಜತೆ ಸಮಾನತೆಯ ಆಧಾರದಲ್ಲಿ ವ್ಯವಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವ ಮೂಲಕ ರಾಜ್ಯದ ತೆರಿಗೆಗಳ ಸಂಗ್ರಹಣೆಯ ಶೇ. ೧೪ ರಷ್ಟು ಬೆಳವಣಿಗೆ ಹೊಂದಲಿದ್ದು, ಒಂದು ವೇಳೆ ಅಂದಾಜಿಗಿಂತ ಕಡಿಮೆ ಸಂಗ್ರಹವಾಗದಿದ್ದಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿತ್ತು. ಶೇ. ೧೬ ರ ಬೆಳವಣಿಗೆ ದರದಂತೆ ೨೦೧೭ ರಿಂದ ೨೦೨೩-೨೪ ರವರೆಗೆ ರಾಜ್ಯದಲ್ಲಿ ಒಟ್ಟು ೪೯೨೨೯೬ ಕೋಟಿ ರೂ.ಗಳ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ರಾಜ್ಯದಲ್ಲಿ ೩೨೬೭೬೪ ಕೋಟಿ ರೂ.ಗಳ ಜಿಎಸ್‌ಟಿ ತೆರಿಗೆ ಸ್ವೀಕೃತವಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿನ ಕೊರತೆ ೧೬೫೫೩೨ ಕೋಟಿ ರೂ.ಗಳಿಗೆ ಎದುರಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ ೧೦೬೨೫೮ ಕೋಟಿ ರೂ.ಗಳ ಪರಿಹಾರ ಬಿಡುಗಡೆ ಮಾಡಿದೆ. ಜಿಎಸ್‌ಟಿ ತೆರಿಗೆಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ೭ ವರ್ಷಗಳ ಅವಧಿಯಲ್ಲಿ ಒಟ್ಟು ೫೯೨೭೪ ಕೋಟಿ ರೂ. ನಷ್ಟವಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಹೇಳಿದ್ದಾರೆ.
೧೫ನೇ ಹಣಕಾಸು ಆಯೋಗವು ೨೦೨೦-೨೧ಕ್ಕೆ ಅನ್ವಯವಾಗುಂತೆ ನೀಡಿದ್ದ ಮಧ್ಯಂತರ ವರದಿಯ ಶಿಫಾರಸ್ಸಿನಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲು ಹಿಂದಿನ ಸರ್ಕಾರ ವಿಫಲವಾಗಿದೆ. ಹಿಂದಿನ ಸರ್ಕಾರ ಕೈಚೆಲ್ಲಿ ಕುಳಿತಿದ್ದರ ಪರವಾಗಿ ಅಂತಿಮ ವರದಿಯ ಶಿಫಾರಸ್ಸಿನಿಂದ ತೆರಿಗೆ ಹಂಚಿಕೆಯಲ್ಲಿ ಹೆಚ್ಚು ನಷ್ಟ ಅನುಭವಿಸಬೇಕಾಯಿತು. ಒಟ್ಟು ತೆರಿಗೆ ಹಂಚಿಕೆಯಲ್ಲಿ ೬೨೦೯೮ ಕೋಟಿ ರೂ. ನಷ್ಟವಾಗಿದೆ. ಇದಲ್ಲದೆ ೧೫ನೇ ಹಣಕಾಸು ಆಯೋಗವು ೨೦೨೦-೨೧ನೇ ವರ್ಷಕ್ಕೆ ೫೪೯೫ ಕೋಟಿ ರೂ. ವಿಶೇಷ ಅನುದಾನ ಒದಗಿಸುವಂತೆ ಹಾಗೂ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಆರು ಸಾವಿರ ಕೋಟಿ ರೂ. ರಾಜ್ಯಕ್ಕೆ ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿತ್ತು. ಆದರೆ ಈ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ತಿರಸ್ಕೃರಿಸುತ್ತಾ ರಾಜ್ಯದಲ್ಲಿ ಹಿಂದೆ ಡಬ್ಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರ ಇದ್ದರೂ ಕೇಂದ್ರದಿಂದ ಒಟ್ಟು ೧೧೪೯೫ ಕೋಟಿ ರೂ.ಗಳ ವಿಶೇಷ ಅನುದಾನ ಪಡೆಯುವಲ್ಲೂ ಹಿಂದಿನ ಸರ್ಕಾರ ಅಸಮರ್ಥವಾಗಿದೆ ಎಂದು ಬಜೆಟ್ ಭಾಷಣದಲ್ಲಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ ಚಾರ್ಜ್‌ಗಳನ್ನು ಹೆಚ್ಚಿಸುತ್ತಿದ್ದು, ಅವುಗಳನ್ನು ರಾಜ್ಯದೊಂದಿಗೆ ಹಂಚಿಕೆ ಮಾಡಿಲ್ಲ. ಸೆಸ್ ಮತ್ತು ಸರ್ ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡಿದ್ದರೆ ಎಲ್ಲ ರಾಜ್ಯಗಳಿಗೆ ಒಟ್ಟು ೧೧೩೪೩೦೧ ಕೋಟಿ ರೂ.ಗಳ ಹಂಚಿಕೆಯಾಗುತ್ತಿತ್ತು. ಇದರಿಂದ ಕರ್ನಾಟಕ ರಾಜ್ಯಕ್ಕೆ ಕಳೆದ ಏಳು ರ್ಷಗಳಲ್ಲಿ ಒಟ್ಟು ೪೫೩೨೨ ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ ಹೇಳಿ, ಕೇಂದ್ರ ಸರ್ಕಾರದ ಅನ್ಯಾಯಗಳ ಬಗ್ಗೆ ಹಾಗೂ ರಾಜ್ಯಗಳಿಗೆ ನ್ಯಾಯಯುತವಾದ ಹಣ ಬಿಡುಗಡೆ ಮಾಡದ ಬಗ್ಗೆಯೂ ಧ್ವನಿ ಎತ್ತಿ ರಾಜ್ಯಗಳ ಹಕ್ಕಿನ ರಕ್ಷಣೆ ಮಾಡುವ ಹೊಣೆಗಾರಿಗೆ ನಮ್ಮದಾಗಿದೆ ಎಂದು ಭಾಷಣದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.