ಕೇಂದ್ರ ದುರಾಡಳಿತ ಖಂಡಿಸಿ ಪ್ರತಿಭಟನಾ ದಿನಾಚರಣೆ

ಬೀದರ:ಮೇ.27: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಏಳು ವರ್ಷಗಳ ದುರಾಡಳಿತವನ್ನು ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ದಿನ ಆಚರಿಸಲಾಯಿತು.

ಸಭಾದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೊರಳಲ್ಲಿ ಕಪ್ಪು ಪಟ್ಟಿ ಹಾಕಿಕೊಂಡು ಪ್ರತಿಭಟನಾ ದಿನ ಆಚರಿಸಿದರು. ಪ್ರಧಾನಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಎಪಿಎಂಸಿ ಹೊರಗೆ ವ್ಯಾಪಾರಕ್ಕೆ ಅನುಮತಿ ನೀಡುವ ಹಾಗೂ ಅವಶ್ಯಕ ವಸ್ತುಗಳ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ, ಕಾಯ್ದೆ ರೂಪಿಸಬೇಕು. ವಿದ್ಯುತ್ ವಿತರಣಾ ವಲಯ ಖಾಸಗಿಕರಣಗೊಳಿಸಬಾರದು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು.ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿ, ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು. ಆಹಾರ ಭದ್ರತೆ ಕಾಯ್ದೆಯಂತೆ ಪ್ರತಿ ಕುಟುಂಬಕ್ಕೆ 35 ಕೆ.ಜಿ ಪಡಿತರ ಆಹಾರಧಾನ್ಯ ವಿತರಿಸಬೇಕು ಎಂದು ಒತ್ತಾಯಿಸಿದರು.
ಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹಮ್ಮದ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಖಮರ್ ಪಟೇಲ್, ಖದೀರ್ ಸಾಬ, ಶಫಾಯತ್ ಅಲಿ, ಪ್ರಭು ತಗಣಿಕರ್, ಅಬ್ದುಲ್ ಖಾದರ್, ಖದೀರ್‍ಮಿಯ ಪಾಲ್ಗೊಂಡಿದ್ದರು.