ಕೇಂದ್ರ ಕಾರಾಗೃಹದ ಬಂದಿಗಳಿಗೆ ಹೈನುಗಾರಿಕೆಹಾಗೂ ಕುರಿ ಸಾಕಾಣಿಕೆ ತರಬೇತಿ

ಕಲಬುರಗಿ:ಫೆ.27:ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ಕಲಬುರಗಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ಬಂದಿಗಳಿಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡುವ ಕುರಿತು ಅರಿವು ಮೂಡಿಸಲು ಒಂದು ದಿನದ ತರಬೇತಿಯನ್ನು ಮಂಗಳವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು.
ಈ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ|| ಎಸ್.ಡಿ. ಅವಟಿ ಅವರು, ಮನ: ಪರಿವರ್ತನೆ ಹಾಗೂ ಸ್ವಾವಲಂಭಿ ಬದುಕು ನಡೆಸಲು ಪಶುಪಾಲನೆ ಇಲಾಖೆಯಿಂದ ಕಾರಾಗೃಹದಲ್ಲಿ ಕಾರಾಗೃಹದ ಬಂದಿಗಳಿಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಈ ತರಬೇತಿ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಹಾಬಾದ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಯಲ್ಲಪ್ಪ ಇಂಗಳಗಿ ಅವರು, ಕುರಿ ಸಾಕಾಣಿಕೆಯು ವರ್ಷವಿಡಿ ನೀಡುವ ಉದ್ಯೋಗ ಇದಾಗಿದ್ದು, ಕುರಿ ಸಾಕಾಣಿಕೆಯಿಂದ ಕಡಿಮೆ ಶ್ರಮ ಅಧಿಕ ಲಾಭವನ್ನು ಪಡೆಯಬಹುದಾಗಿದೆ. ಕರ್ನಾಟಕದಲ್ಲಿ 5 ತಳಿಯ ಕುರಿಗಳು ಅಲ್ಲದೇ ದೇಶಿಯ ತಳಿಯ ಮೇಕೆಗಳನ್ನು ಸಾಕಲಾಗುತ್ತಿದೆ. ಕುರಿ ಸಾಕಾಣಿಕೆಯ ಬಗ್ಗೆ ತರಬೇತಿಯನ್ನು ಪಡೆದು ಅವುಗಳ ಪಾಲನೆ, ಪೋಷಣೆ ಮತ್ತು ರಕ್ಷಣೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಲ್ಲಿ ಅತ್ಯಂತ ಯಶಸ್ವಿಯಾಗಿ ಈ ಉದ್ಯೋಗ ಮಾಡಬಹುದಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ|| ಪಿ.ರಂಗನಾಥ್ ಅವರು, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗೆ ಈ ತರಬೇತಿ ಹಮ್ಮಿಕೊಂಡಿದ್ದಕ್ಕಾಗಿ ಪಶು ಪಾಲನಾ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸಂಸ್ಥೆಯ ಅಧೀಕ್ಷಕರಾದ ಬಿ.ಎಂ. ಕೊಟ್ರೇಶ್, ವೈದ್ಯಾಧಿಕಾರಿ ಡಾ|| ಎಸ್.ಕೆ ಠಕ್ಕಳಿಕೆ, ಕಲಬುರಗಿ ಪಶು ಆಸ್ಪತ್ರೆ, ಸಹಾಯಕ ನಿರ್ದೇಶಕರು, ಸಂಸ್ಥೆಯ ಪಶು ಪರಿವೀಕ್ಷಕರಾದ ಮೀರ್ ಮಂಜೂರ್ ಅಲಿ ಖಾನ್, ಜೈಲರ್ ಸಾಗರ್ ಪಾಟೀಲ ಹಾಗೂ ಸಿಬ್ಬಂದಿ ವರ್ಗಗಳು ಉಪಸ್ಥಿತರಿದ್ದರು.
ಪಶು ಇಲಾಖೆ ವತಿಯಿಂದ ತರಬೇತಿಯಲ್ಲಿ ಭಾಗವಹಿಸಿದ ಬಂದಿಗಳಿಗೆ ಕುರಿ, ಮೇಕೆ ಸಾಕಾಣಿಕೆಯ ತರಬೇತಿಯ ಕೈಪಿಡಿ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.
ಸಂಸ್ಥೆಯ ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಕಾರಾಗೃಹದ ಬಂದಿಗಳು ಪ್ರಾರ್ಥನಾ ಗೀತೆಗಳನ್ನು ಹಾಡಿದರು.