ಕೇಂದ್ರ ಕಾರಾಗೃಹದ ಆವರಣದಲ್ಲಿ 10 ಮೊಬೈಲ್, ಸಿಮ್ ಕಾರ್ಡ್ ಪತ್ತೆ

ಕಲಬುರಗಿ,ಆ.31-ಇಲ್ಲಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಕಾರಾಗೃಹದ ಅಧಿಕಾರಿಗಳು ಬೆಳಿಗ್ಗೆ ಬೀಗ ತೆರೆಯುವ ಮುನ್ನ ಕಾರಾಗೃಹದ ಗೋಡೆಯ ಅಕ್ಕಪಕ್ಕ, ಕಾರಾಗೃಹದ ಒಳ ಆವರಣ ಪರಿಶೀಲನೆ ಮಾಡಿ ಯಾವುದೇ ನಿಷೇಧಿತ ವಸ್ತುಗಳು ಇಲ್ಲದೇ ಇರುವುದನ್ನು ಖಾತ್ರಿ ಪಡಿಸಿಕೊಂಡು ಬೀಗ ತೆರೆಯುವುದು ವಾಡಿಕೆ. ಅದರಂತೆ ಆ.29 ರಂದು ಬೆಳಿಗ್ಗೆ 6.30ಕ್ಕೆ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ, ಕಾರ್ಯನಿರ್ವಾಹಕ ಜೈಲರ್ ಸಾಗರ್ ಪಾಟೀಲ್ ಅವರು ಸೆಲ್ ವಿಭಾಗದ ಹಿಂಭಾಗದಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಎರಡು ಪ್ಲಾಸ್ಟಿಕ್ ಚೀಲವನ್ನು ಭದ್ರವಾಗಿ ಕಟ್ಟಿದ್ದ ಎರಡು ಕವರ್‍ಗಳು ಪತ್ತೆಯಾಗಿದ್ದು, ಅವುಗಳನ್ನು ತೆರೆದು ಪರಿಶೀಲನೆ ನಡೆಸಿದಾಗ ಅದರಲ್ಲಿ 5 ಮೊಬೈಲ್, ಸಿಮ್, ಬ್ಯಾಟರಿ ಮತ್ತು 5 ಮೊಬೈಲ್ ಮತ್ತು ಬ್ಯಾಟರಿ, ಚಾರ್ಜರ್, ಚಾರ್ಜರ್ ಕೇಬಲ್ ಮತ್ತು ಇಯರ್ ಫೋನ್‍ಗಳು ಇರುವುದು ಪತ್ತೆಯಾಗಿದೆ.
ಈ ಸಂಬಂಧ ಕಾರಾಗೃಹದ ಅಧೀಕ್ಷಕ ಡಾ.ಪಿ.ರಂಗನಾಥ ಅವರು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಫರಹತಾಬಾದ ಠಾಣೆ ಪೊಲೀಸರು ಕಾರಾಗೃಹದ ಆವರಣದಲ್ಲಿ ಪತ್ತೆಯಾದ ಮೊಬೈಲ್, ಬ್ಯಾಟರಿ, ಸಿಮ್ ಕಾರ್ಡ್‍ಗಳು ಯಾರ ಹೆಸರಿನಲ್ಲಿ ಇವೆ ಎಂಬುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ.