ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ, ಪರಿಶೀಲನೆ


ಧಾರವಾಡ, ಏ.18: ಧಾರವಾಡ ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಕೋವಿಡ್ ಎಸ್.ಓ.ಪಿ. ಹಾಗೂ ಜೈಲು ನಿಯಮಗಳ ಪಾಲನೆ ಕುರಿತು ಪರಿಶೀಲಿಸಿದರು.

ಕೇಂದ್ರ ಕಾರಾಗೃಹದಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಅವರು ಪರಿಶೀಲಿಸಿ,  ಶಿಕ್ಷೆಗೆ ಒಳಪಟ್ಟ ಅಪರಾಧಿ, ವಿಚಾರಣಾಧೀನ ಮತ್ತು ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಆರೋಪಿತರು ಜೈಲಿಗೆ ಆಗಮಿಸಿದಾಗ ಅವರಿಗೆ ಜೈಲು ಮುಖ್ಯ ಕಟ್ಟಡದ ಹೊರಬಾಗದ ಪ್ರತ್ಯೇಕ ಕಟ್ಟಡದಲ್ಲಿ 21 ದಿನ ಹಾಗೂ ಜೈಲಿನೊಳಗೆ ಪ್ರತ್ಯೇಕವಾಗಿ 14 ದಿನ ಕ್ವಾರಂಟೈನ್ ಆಗುವ ಕೊಠಡಿಗಳನ್ನು ಸಿ.ಜೆ.ಎಮ್ ಅವರು ಪರಿಶೀಲಿಸಿದರು.

ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರು ಒಬ್ಬರೇ ಪ್ರತ್ಯೇಕವಾಗಿ ಖೈದಿಗಳೊಂದಿಗೆ ಊಟ, ವಸತಿ, ಚಿಕಿತ್ಸೆ ಹಾಗೂ ಸಂವಹನ ಸೌಲಭ್ಯ ಕುರಿತು ಮಾತನಾಡಿಸಿ ಅಭಿಪ್ರಾಯ ಪಡೆದರು. ಈ ಸಂದರ್ಭದಲ್ಲಿ ಜೈಲು ಸೌಲಭ್ಯಗಳ ಬಗ್ಗೆ ಖೈದಿಗಳು ತೃಪ್ತಿ ವ್ಯಕ್ತಪಡಿಸಿದರು. 

ನಂತರ ಅವರು ಖೈದಿಗಳು ತಮ್ಮ ಕುಟುಂಬಸ್ಥರು, ಸಂಬಂಧಿಗಳು ಮತ್ತು ವಕೀಲರೊಂದಿಗೆ ಮುಖಾಮುಖಿ ಸಂವಹನಕ್ಕಾಗಿ ಸ್ಥಾಪಿಸಿರುವ ಇ-ಮುಲಾಕತ್ (ವಿ.ಸಿ) ಸೌಲಭ್ಯ ಹಾಗೂ ಸ್ಥಿರ ದೂರವಾಣಿ ಪ್ರ್ರಿಜನ್ ಕಾಲ್ ಸಿಸ್ಟಮ್ ಅಳವಡಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.