ಕೇಂದ್ರ ಅಧ್ಯಯನ ತಂಡದಿಂದ ಬೆಳೆ ಹಾನಿ ಪರಿಶೀಲನೆ

ಯಾದಗಿರಿ,ಸೆ.೯-ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಇಂದು ಜಿಲ್ಲೆಯ ನಾಯ್ಕಲ್, ಮಲ್ಲಾ (ಬಿ), ಕೆಂಭಾವಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದಾದ ಮನೆ, ರಸ್ತೆ ಮತ್ತು ಬೆಳೆಹಾನಿಯ ಪರಿಶೀಲನೆ ನಡೆಸಿತು.
ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಾಳಾದ ಬೆಳೆಗಳ ವೀಕ್ಷಣೆಗೆ ತಂಡ ಆಗಮಿಸಿತ್ತು. ತಂಡದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಎಸ್.ಜಗದೀಶ ಜೊತೆಯಲ್ಲಿದ್ದರು.
ನಂತರ ತಂಡ ಗುರುಮಠಕಲ್ ತಾಲ್ಲೂಕಿನಲ್ಲಿ ಮಳೆಯಿಂದ ಬೆಳೆ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.
ಕೆಂಭಾವಿ:
ಕೇಂದ್ರದ ನೆರೆ ಅಧ್ಯಯನ ತಂಡ ಪಟ್ಟಣದ ವಾರ್ಡನಂ ೧ ಮತ್ತು ೨ಕ್ಕೆ ಭೇಟಿ ನೀಡಿ ಅಕಾಲಿಕವಾಗಿ ಸುರಿದ ಮಳೆಗೆ ಹಾನಿಯಾದ ೩ ಮನೆಗೆಳ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಸದಸ್ಯರು ಮಳೆಯಿಂದಾದ ಹಾನಿಯ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಿ ಸೂಕ್ತ ಪರಿಹಾರ ನೀಡುವದಾಗಿ ತಿಳಿಸಿದರು.
ಕೇಂದ್ರ ಅಧ್ಯಯನ ತಂಡದೊಂದಿಗೆ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮತ್ತು ಎಡಿಸಿ, ತಾಲೂಕಾ ದಂಡಾಧಿಕಾರಿಗಳು ಸೇರಿದಂತೆ ಇತರೆ ಕಂದಾಯ ಇಲಾಖಾ ಅಧಿಕಾರಿಗಳು ಇದ್ದರು.