ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮವಾದ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್, ಡೋಣೂರ್ ಅಮಾನತ್ತಿಗೆ ಸಾಗರ್ ಆಗ್ರಹ

ಕಲಬುರಗಿ,ಅ.3: ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮುವಾದ, ಕೇಸರೀಕರಣ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಹಾಗೂ ಪ್ರೊ. ಬಸವರಾಜ್ ಡೋಣೂರ್ ಅವರಿಗೆ ಅಮಾನತ್ತುಗೊಳಿಸಬೇಕು ಎಂದು ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಆಂದೋಲನಾ ಚಾಲನಾ ಸಮಿತಿಯ ಅಧ್ಯಕ್ಷ ಡಾ. ಡಿ.ಜಿ. ಸಾಗರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತ್ವ ಭಾರತದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿರುವ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಡಾ. ಅಂಬೇಡ್ಕರ್ ಪ್ರಣೀತ ಸಂವಿಧಾನದ ಮೇಲೆ ನಡೆಯಬೇಕೇ ಹೊರತು ಕೋಮುವಾದಿ ಅಜೆಂಡಾ ಮೇಲಲ್ಲ. ವಿಶ್ವವಿದ್ಯಾಲಯಕ್ಕೆ ಅವರು ಕುಲಪತಿಗಳಾಗಿ ಬಂದ ಮೇಲೆ ಇಡೀ ವಿಶ್ವವಿದ್ಯಾಲಯ ಶೈಕ್ಷಣಿಕ ವಾತಾವರಣವು ಕೋಮುವಾದೀಕರಣಕ್ಕೆ ಒಳಗಾಗಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿಸುವ ಮತ್ತು ಹಿಂದುತ್ವ ಚಟುವಟಿಕೆಗಳಿಗೆ ಸಹಕಾರ ನೀಡುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಧ್ಯಾಪಕರು ಮಾನ್ಯತೆ ಕೊಡುತ್ತಿದ್ದಾರೆ. ಅಲ್ಲದವರಿಗೆ ತೊಂದರೆ, ಕಿರುಕುಳ ಕಟ್ಟಿಟ್ಟ ಬುತ್ತಿ. ವೈಜ್ಞಾನಿಕ, ವೈಚಾರಿಕ ಆಲೋಚನೆ ಮಾಡುವ ವಿದ್ಯಾರ್ಥಿ, ಪ್ರಾಧ್ಯಾಪಕರಿಗೆ ಭಯ ಹುಟ್ಟಿಸಲಾಗುತ್ತಿದೆ. ಬಹುತ್ವ ಭಾರತದ ಮೌಲ್ಯಾಧಾರಿತ ವಿಚಾರಧಾರೆ ವಿದ್ಯೆಯನ್ನು ಕಲಿಯಬೇಕಾದ ಯುವ ಜನಾಂಗ ಭಯದಲ್ಲಿ ಬದುಕುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಒಪ್ಪದ ವಿದ್ಯಾರ್ಥಿಗಳ ಮೇಲೆ ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿ ಅಮಾನತ್ತು ಮಾಡುವುದು, ಪ್ರಕರಣ ದಾಖಲಿಸುವುದು ಎಗ್ಗಿಲ್ಲದೇ ನಡೆದಿದೆ. ಸಾಮರಸ್ಯಕ್ಕೆ ಹೆಸರಾದ ಕಲ್ಯಾಣ ಕರ್ನಾಟಕದಲ್ಲಿ ಉಗ್ರ ಹಿಂದುತ್ವ ವಿಷಾನಿಲ ಹಬ್ಬಿಸಿ ಇಲ್ಲಿನವರ ಭವಿಷ್ಯವನ್ನು ಕತ್ತಲು ಕೂಪಕ್ಕೆ ತಳ್ಳುವ ಹುನ್ನಾರ ಸಂಘಿಗಳಲ್ಲಿದೆ ಎಂದು ದೂರಿದ ಅವರು, ಇದರಿಂದಾಗಿ ವಿಶ್ವವಿದ್ಯಾಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಆವರಣದಲ್ಲಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರೇ ಮುಂದೆ ನಿಂತು ರಾಮನವಮಿ, ಸರಸ್ವತಿ ಪೂಜೆ, ಹೋಮ- ಹವನ, ಗಣಪತಿ ಉತ್ಸವ ಮುಂತಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಕೋಮು ದ್ವೇಷನವನ್ನು ಕಸಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕುಲಪತಿಗಳು ತಾವೊಬ್ಬ ಸಂಘ ಪರಿವಾರದ ಸೇವಕ ಎಂಬುದನ್ನು ರಾಜಾರೋಷವಾಗಿ ಪ್ರದರ್ಶಿಸುತ್ತಿದ್ದಾರೆ. ತನ್ಮೂಲಕ ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದ ಕನ್ನಡ ನಾಡನ್ನು ಕೋಮು ದಳ್ಳುರಿಯ ಅಗ್ನಿ ಕುಂಡವಾಗಿ ಮಾರ್ಪಡಿಸುತ್ತಿದ್ದಾರೆ. ದೇಶದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಭಾತೃತ್ವ ಭಾವನೆ ಮೂಡಿಸುವ ಬದಲು ಪ್ರತ್ಯೇಕತೆಯ ಪರಸ್ಪರ ದ್ವೇಷ, ಅಸೂಯೆಗಳನ್ನು ಬೆಳೆಸಲಾಗುತ್ತಿದೆ. ದಲಿತ, ಹಿಂದುಳಿದ, ಮಹಿಳೆ ಇತ್ಯಾದಿ ವಿದ್ಯಾರ್ಥಿಗಳು ಅಪಾಯಕಾರಿಗಳು, ಅವರೇ ದ್ರೋಹಿಗಳು ಎಂಬಂತೆ ಬಿಂಬಿಸಿ ಅವರ ಮೇಲೆ ಪ್ರಕರಣಗಳನ್ನು ಹಾಕಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವನ್ನೇ ನೆಲಸಮ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದಲ್ಲಿ ಸಂಘ ಪರಿವಾರದ ತಂಡವೊಂದು ಸೇರಿಕೊಂಡು ಬುದ್ಧ- ಬಸವ- ಅಂಬೇಡ್ಕರ್ ಅವರ ತತ್ವಗಳನ್ನು ಮೂಲೆಗುಂಪು ಮಾಡಲೆಂದೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಕಿಡಿಕಾರಿದ ಅವರು, ವಿಶ್ವವಿದ್ಯಾಲಯವನ್ನು ಕೋಮುವಾದಿಗಳಿಂದ ರಕ್ಷಿಸಬೇಕಿದೆ ಎಂದರು.
ದಲಿತ ಮತ್ತು ದಲಿತೇತರ ವಿದ್ಯಾರ್ಥಿಗಳ ನಡುವಿನ ತಾರತಮ್ಯ ಮಾಡುವುದನ್ನು ಕೂಡಲೇ ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಇಂತಹ ಅನ್ಯಾಯಗಳಿಗೆ ಮೂಲ ಕಾರಣವಾಗಿರುವ ಪ್ರೊ. ಬಸವರಾಜ್ ಡೋಣೂರ್ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಹಾಗೂ ಅವರ ಮೇಲಿನ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಕ್ರಮಗಳ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘ ಪರಿವಾರದ ಚಟುವಟಿಕೆಗಳಾದ ಶಾಖಾ ಮತ್ತು ಧಾರ್ಮಿಕ ಆಚರಣೆಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸದಂತೆ, ಹೋಮ, ಹವನ, ಸರಸ್ವತಿ ಪೂಜೆ, ಗಣಪತಿ ಉತ್ಸವ, ರಾಮನವಮಿ, ಗಾಯತ್ರಿ ಮಂತ್ರ ಪಠಣ ಇತ್ಯಾದಿ ಸನಾತನ ನಂಬಿಕೆಗಳಿದ್ದಲ್ಲಿ ಅವುಗಳನ್ನು ಮನೆಯಲ್ಲಿ ವೈಯಕ್ತಿಕವಾಗಿ ಆಚರಿಸಿಕೊಳ್ಳಬೇಕು, ಯಾವುದೇ ಧರ್ಮದ ನಂಬಿಕೆಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಅದೂ ಅಧಿಕೃತ ಸರ್ಕಾರಿ ಆಚರಣೆಯಾಗಿ ಮಾಡಕೂಡದು. ಇದು ಸಂವಿಧಾನದ ಧರ್ಮ ನಿರಪೇಕ್ಷತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದರು.
ವಿಶ್ವವಿದ್ಯಾಲಯಗಳ ಅಧ್ಯಾಪಕರು, ಪ್ರಾಧ್ಯಾಪಕರು ಯಾವುದೇ ವೈಯಕ್ತಿಕ ನಂಬಿಕೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದನ್ನು ನಿಷೇಧಿಸುವಂತೆ, ಅವೈಜ್ಞಾನಿಕ ವಿಚಾರಧಾರೆಯ ವ್ಯಕ್ತಿಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕರೆಯದಿರುವಂತೆ, ಪಿ. ನಂದಪ್ಪ ಒಳಗೊಂಡಂತೆ ಸಂಶೋಧನಾ ವಿದ್ಯಾರ್ಥಿಗಳಾದ ರಾಹುಲ್, ಆದರ್ಶ ಇನ್ನೂ ಅನೇಕ ವಿದ್ಯಾರ್ಥಿಗಳ ಮೇಲೆ ಹೇರಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಅವರು ಒತ್ತಾಯಿಸಿದರು.
ಸಂಘ ಪರಿವಾರದ ಕಾಲಾಳುವಿನಂತೆ ಕಾರ್ಯನಿರ್ವಹಿಸುತ್ತಿರುವ ಪ್ರೊ. ಬಸವರಾಜ್ ಡೋಣೂರು, ಎಬಿವಿಪಿ ರಾಜ್ಯ ಕಾರ್ಯದರ್ಶಿ ಡಾ. ಬಸವರಾಜ್ ಕೊಲಕಡ್ಡಿ, ಅದೇ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಡಾ. ಲೋಹಿಣಾಕ್ಷ ಶ್ರೀಲಾಲು ಅವರುಗಳನ್ನು ಕಾನೂನು ವಿರೋಧಿ ಚಟುವಟಿಕೆಯ ಅಪರಾಧದ ಅಡಿಯಲ್ಲಿ ಅಮಾನತ್ತುಗೊಳಿಸುವಂತೆ ಅವರು ಆಗ್ರಹಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಎಲ್ಲ ಘಟನೆಯನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ, ವಿಶ್ವವಿದ್ಯಾಲಯವನ್ನು ಕೋಮುವಾದಿಯಿಂದ ಮುಕ್ತ ಮಾಡುವಂತೆ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಲಚ್ಚಪ್ಪ ಜಮಾದಾರ್, ಪ್ರೊ. ಆರ್.ಕೆ. ಹುಡಗಿ, ಮಹಾಂತೇಶ್ ಎಸ್. ಕವಲಗಿ, ಅಬ್ದುಲ್ ಖಾದರ್, ಮಾರುತಿ ಗೋಖಲೆ ಮುಂತಾದವರು ಉಪಸ್ಥಿತರಿದ್ದರು.