ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರಿಗೆ ಅವಮಾನ ಕ್ರಮಕ್ಕೆ ಎಬಿವಿಪಿ ಆಗ್ರಹ

ಕಲಬುರಗಿ:ಸೆ.21: ಸ್ವಾಮಿ ವಿವೇಕಾನಂದ್ ಅವರಿಗೆ ಅವಮಾನ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಕೇರಳ್ ಮೂಲದ ವಿದ್ಯಾರ್ಥಿ ಆದರ್ಶ ಡಿ. ಕುಮಾರ್ ಅವರನ್ನು ವಿಶ್ವವಿದ್ಯಾಲಯದಿಂದ ಶಾಶ್ವತವಾಗಿ ಅಮಾನತ್ತುಗೊಳಿಸಿ, ಅವರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಮಣಿಕಂಠ್ ಕಳಸ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್ 11ರಂದು ಯುವ ಸಮೂಹಕ್ಕೆ ಸಂದೇಶ ನೀಡಬೇಕಾದ ದಿನದಂದೇ ವಿದ್ಯಾರ್ಥಿ ಆದರ್ಶ ಸ್ವಾಮಿ ವಿವೇಕಾನಂದ್ ಅವರ ಭಾವಚಿತ್ರವನ್ನು ಕಸದ ತೊಟ್ಟಿಗೆ ಅಂಟಿಸಿ, ಇದು ನಿಮ್ಮ ಸ್ಥಾನವನ್ನು ತೋರಿಸುತ್ತದೆ ಎಂಬ ಸಂದೇಶದೊಂದಿಗೆ ತನ್ನ ಇನ್‍ಸ್ಟ್ರಾ ಗ್ರಾಂನಲ್ಲಿ ಹಾಕುವ ಮೂಲಕ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಅದನ್ನು ನೋಡಿದ ಕೇಂದ್ರೀಯ ವಿಶ್ವವಿದ್ಯಾಲಯದ ಅನೇಕ ವಿದ್ಯಾರ್ಥಿಗಳು ಆತನು ಇರುವ ಭೀಮಾ ವಸತಿ ನಿಲಯಕ್ಕೆ ಹೋಗಿ, ಕೂಡಲೇ ಇನಸ್ಟ್ರಾಗ್ರಾಮ್‍ನಿಂದ ಸಂದೇಶವನ್ನು ತೆರವುಗೊಳಿಸು ಎಂದು ಕೇಳಿದರೂ ಸಹ ಅವರು 24 ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಟ್ಟಿದ್ದರು ಎಂದು ಅವರು ಆರೋಪಿಸಿದರು.
ಇದರಿಂದಾಗಿ ಮಾಹಿತಿ ಕುಲಸಚಿವರಿಗೆ ತಲುಪಿ, ತಕ್ಷಣವೇ ಆ ಕುರಿತು ವಸತಿ ನಿಲಯದ ವಾರ್ಡ್‍ನ್ ಜೊತೆ ಸಮಾಲೋಚಿಸಿದಾಗ ಸ್ವಾಮಿ ವಿವೇಕಾನಂದ್ ಅವರಿಗೆ ಅವಮಾನ ಮಾಡಿರುವುದು ಖಚಿತವಾಗಿದೆ. ಹಾಗಾಗಿ ಆ ವಿದ್ಯಾರ್ಥಿಗೆ ಕುಲಸಚಿವರು ನೋಟಿಸ್ ನೀಡಿದ್ದಾರೆ. ಆ ನೋಟಿಸ್‍ಗೂ ಸಹ ಆತ ಉತ್ತರಿಸಿಲ್ಲ. ಹೀಗಾಗಿ ಕುಲಸಚಿವರು ಅಮಾನತ್ತು ಮಾಡುವ ಮೂಲಕ ಸೂಕ್ರ ಕ್ರಮವನ್ನು ಕೈಗೊಂಡರು ಎಂದು ಅವರು ಹೇಳಿದರು.
ಸ್ವಾಮಿ ವಿವೇಕಾನಂದ್ ಅವರಿಗೆ ಅವಮಾನ ಮಾಡಿದ ವಿದ್ಯಾರ್ಥಿಗೆ ಬುದ್ದಿವಾದ ಹೇಳಬೇಕಿತ್ತು. ಆತ ಪಶ್ಚಾತಾಪ ಪಡಲಿ, ಶಿಕ್ಷೆ ಅನುಭವಿಸಲಿ ಎಂದು ತಿಳಿಸಬೇಕಾಗಿತ್ತು. ಅದನ್ನು ಬಿಟ್ಟು ಆರೋಪಿ ವಿದ್ಯಾರ್ಥಿಯ ಪರ ಕೆಲವರು ಬೆಂಬಲಕ್ಕೆ ನಿಂತರು. ಆತನ ಅಮಾನತ್ತು ಹಿಂಪಡೆಯುವಂತೆ ಒತ್ತಾಯಿಸಿದರು. ಅಲ್ಲದೇ ಪ್ರತಿಭಟನೆಯನ್ನೂ ಸಹ ವಿಶ್ವವಿದ್ಯಾಲಯದಲ್ಲಿ ಮಾಡಿದರು. ಇದನ್ನು ಸಹಿಸಿಕೊಳ್ಳಲು ಆಗದೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹ ನೂರಾರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿ ಆರೋಪಿ ವಿದ್ಯಾರ್ಥಿಯ ಅಮಾನತ್ತು ಮುಂದುವರೆಸುವಂತೆ ಒತ್ತಾಯಿಸಲಾಯಿತು ಎಂದು ಅವರು ತಿಳಿಸಿದರು.
ಇಷ್ಟೆಲ್ಲ ಘಟನೆ ಆದ ನಂತರ ಆರೋಪಿ ವಿದ್ಯಾರ್ಥಿಯು ಐದು ದಿನಗಳ ನಂತರ ಸೆಪ್ಟೆಂಬರ್ 15ರಂದು ನರೋಣಾ ಪೋಲಿಸ್ ಠಾಣೆಗೆ ದೂರು ಸಲ್ಲಿಸಿ, ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸ್ವಾಮಿ ವಿವೇಕಾನಂದ್ ಅವರ ಭಾವಚಿತ್ರ ಅವಮಾನ ವಿರೋಧಿಸಿ ಪ್ರತಿಭಟನೆ ಮಾಡಿದವರನ್ನು ಗುರಿಯಾಗಿರಿಸಿಕೊಂಡು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಮಹಾದೇವನ್, ನರೇಂದ್ರ, ಶಶಿ ಸೇರಿದಂತೆ ಸುಮಾರು 30 ಜನರ ವಿರುದ್ದ ದೂರು ಸಲ್ಲಿಸಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಪ್ರತಿಭಟನೆಕಾರರನ್ನು ಗುರಿಯಾಗಿರಿಸಿ ಇಂತಹ ಸುಳ್ಳು ದೂರು ಸಲ್ಲಿಸಿದ್ದಾನೆ ಎಂದು ಅವರು ಆಕ್ರೋಶ ಹೊರಹಾಕಿದರು.
ಆರೋಪಿತ ವಿದ್ಯಾರ್ಥಿಗೆ ಜೀವ ಭಯ ಇದ್ದಲ್ಲಿ 11ರಂದೇ ದೂರು ಸಲ್ಲಿಸಬಹುದಾಗಿತ್ತು. ಅದಾದ ನಂತರ ಐದು ದಿನಗಳ ಮೇಲೆ ದೂರು ಕೊಟ್ಟಿದ್ದಾನೆ. ಆ ಸಮಯದಲ್ಲಿ ಆತನ ಜೀವಕ್ಕೆ ಯಾವುದೇ ಭಯ ಹುಟ್ಟಿಸಬಹುದಾಗಿತ್ತು. ಇದೆಲ್ಲ ಸುಳ್ಳು ದೂರು ಎಂದು ಅವರು ತಿಳಿಸಿದರು.
ಆರೋಪಿತ ವಿದ್ಯಾರ್ಥಿಯು ಮೂವರನ್ನು ಗುರುತಿಸುವೆ ಹಾಗೂ ಇನ್ನೂ 20ರಿಂದ 30 ಜನರನ್ನು ಗುರುತಿಸಬಲ್ಲೆ ಎಂದು ದೂರಿನಲ್ಲಿ ಹೇಳಿದ್ದಾನೆ. ಇದು ಸರಿಯಲ್ಲ. ತಪ್ಪಿತಸ್ಥ ವಿದ್ಯಾರ್ಥಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಸ್ವಾಮಿ ವಿವೇಕಾನಂದ್ ಅವರಿಗೆ ಅವಮಾನ ಮಾಡಿದವರಿಗೆ ಯಾವುದೇ ರೀತಿಯಲ್ಲಿ ಬೆಂಬಲಿಸಬಾರದು. ಅದನ್ನು ರಾಷ್ಟ್ರದ್ರೋಹದ ಕೃತ್ಯ ಎಂದು ಪರಿಗಣಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಮಾನತ್ತು ಆದರೂ ಸಹ ಇನ್ನೂ ಆರೋಪಿ ವಿದ್ಯಾರ್ಥಿ ವಿಶ್ವವಿದ್ಯಾಲಯದಲ್ಲಿ ಹಾಗೂ ವಸತಿ ನಿಲಯದಲ್ಲಿಯೇ ಇದ್ದಾನೆ. ಯಾವುದೇ ನೋಟಿಸ್‍ಗೂ ಸಹ ಕಿಮ್ಮತ್ತು ಕೊಡುತ್ತಿಲ್ಲ. ತನ್ನ ಮೇಲಿನ ಆರೋಪವನ್ನು ಮುಚ್ಚಿಕೊಳ್ಳಲು ಆತನ ವಿರುದ್ಧ ಹೋರಾಟ ಮಾಡಿದವರ ಮೇಲೆ ಸುಳ್ಳು ದೂರು ಸಲ್ಲಿಸಿದ್ದಾನೆ ಎಂದು ಅವರು ಆರೋಪಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ನಮಗೆಲ್ಲ ಹೆಮ್ಮೆ ತರಿಸಿದೆ. ವಿಶ್ವವಿದ್ಯಾಲಯದಲ್ಲಿ ಉತ್ಕøಷ್ಟ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಎಲ್ಲರ ಅಭಿಲಾಷೆ. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ್ ಅವರಿಗೆ ಅವಮಾನ ಆಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಖಂಡಿಸದೇ, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆ ತೆರೆಯಲು ಬಿಡಲಾರೆ. ವಿಶ್ವವಿದ್ಯಾಲಯದಲ್ಲಿ ಆರ್‍ಎಸ್‍ಎಸ್ ಬೈಠಕ್‍ಗಳು ನಡೆಯುತ್ತವೆ ಎಂದು ಹೇಳುವ ಮೂಲಕ ತಪ್ಪು ಸಂದೇಶವನ್ನು ನೀಡಿದ್ದಾರೆ. ಸ್ವಾಮಿ ವಿವೇಕಾನಂದ್ ಅವರ ಕುರಿತು ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರೂ ಸೇರಿದಂತೆ ಮಹಾಪುರುಷರೇ ಗೌರವ ಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ್ ಅವರ ಜನುಮ ದಿನವನ್ನು ಯುವಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಖಂಡಿಸುವುದನ್ನು ಬಿಟ್ಟು ತಪ್ಪು ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ಅವರು ಖಂಡಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಕೂಡಲೇ ತಪ್ಪಿತಸ್ಥ ವಿದ್ಯಾರ್ಥಿಯ ಅಮಾನತ್ತು ಮುಂದುವರೆಸುವಂತೆ ಹಾಗೂ ಸರಿಯಾದ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ, ಆರೋಪಿತ ವಿದ್ಯಾರ್ಥಿ ಸಲ್ಲಿಸಿದ ಸುಳ್ಳು ಪ್ರಕರಣವನ್ನು ಹಿಂಪಡೆಯುವಂತೆ ಹಾಗೂ ಆರೋಪಿ ವಿದ್ಯಾರ್ಥಿಯ ಪರ ಪ್ರತಿಭಟನೆ ಮಾಡಿದ ಹಾಗೂ ಬೆಂಬಲಿಸಿದವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ವಿಭಾಗೀಯ ಸಂಚಾಲಕ ಅಶೋಕ್ ಗುತ್ತೇದಾರ್ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.